ಪ್ರಧಾನಿ ಮೋದಿಯ ಶಿಕ್ಷಣಾರ್ಹತೆ ಬಹಿರಂಗ ಪಡಿಸಿ : ಸಿಐಸಿಗೆ ಕೇಜ್ರಿವಾಲ್ ಆಗ್ರಹ

ಹೊಸದಿಲ್ಲಿ, ಎ.28: ಪ್ರಧಾನಿ ನರೇಂದ್ರ ಮೋದಿಯವರ ಶಿಕ್ಷಣಾರ್ಹತೆಯ ಕುರಿತಾದ ಮಾಹಿತಿಯನ್ನು ಕೇಂದ್ರೀಯ ಮಾಹಿತಿ ಆಯೋಗವು (ಸಿಐಸಿ) ಬಹಿರಂಗ ಪಡಿಸಬೇಕೆಂದು ದಿಲ್ಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಇಂದು ಆಗ್ರಹಿಸಿದ್ದಾರೆ.
ಅವರ ಬಗ್ಗೆ ಬಹಿರಂಗಪಡಿಸುವ ದಾಖಲೆಗಳನ್ನು ತಾನು ಆಕ್ಷೇಪಿಸುವುದಿಲ್ಲವೆಂದು ಮಾಹಿತಿ ಆಯುಕ್ತ ಎಂ.ಶ್ರೀಧರ ಆಚಾರ್ಯಲು ಅವರಿಗೆ ಬರೆದ ಪತ್ರವೊಂದರಲ್ಲಿ ಕೇಜ್ರಿವಾಲ್ ಹೇಳಿದ್ದು, ಆಯೋಗವು ಮೋದಿಯವರ ಶಿಕ್ಷಣಾರ್ಹತೆಯ ಕುರಿತಾದ ಮಾಹಿತಿಯನ್ನು ‘ಅಡಗಿಸಲು’ ಯಾಕೆ ಬಯಸುತ್ತದೆಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ನರೇಂದ್ರ ಮೋದಿ ಯಾವುದೇ ಪದವಿ ಪಡೆದಿಲ್ಲವೆಂಬ ಆರೋಪವಿದೆ. ದೇಶದ ಜನ ನಿಜವನ್ನು ತಿಳಿಯ ಬಯಸಿದ್ದಾರೆ. ಆದರೆ, ಅವರ ಪದವಿಯ ಕುರಿತ ಮಾಹಿತಿಯನ್ನು ಬಹಿರಂಗಪಡಿಸುವುದಕ್ಕೆ ಆಯೋಗವು ನಿರಾಕರಿಸಿದೆ. ಹೀಗೆ ಯಾಕೆ ಮಾಡುತ್ತೀರಿ? ಇದು ತಪ್ಪು ಎಂದು ಕೇಜ್ರಿವಾಲ್ ಹೇಳಿದ್ದಾರೆ.
2014ರ ದಿಲ್ಲಿ ವಿಧಾನಸಭಾ ಚುನಾವಣಾ ನಾಮಪತ್ರದಲ್ಲಿ ಕೇಜ್ರಿವಾಲರಿಗೆ ತನ್ನ ವಿಳಾಸ ಬದಲಾಯಿಸಲು ಹೇಗೆ ಅವಕಾಶ ನೀಡಲಾಯಿತೆಂದು ಕೇಳಿದ ಪ್ರಕರಣದಲ್ಲಿ, ಕಳೆದ ತಿಂಗಳು ಸಿಐಸಿ, ಕೇಜ್ರಿವಾಲ್ ಒಬ್ಬ ಶಾಸಕನಾಗಿರುವ ಕಾರಣ ಅವರನ್ನು ಸಾರ್ವಜನಿಕ ಅಧಿಕಾರಿಯೆಂದು ಯಾಕೆ ಘೋಷಿಸಬಾರದೆಂದು ಪ್ರಶ್ನಿಸಿತ್ತು.
‘‘ನೀವು ನನ್ನೆಲ್ಲ ದಾಖಲೆಗಳನ್ನು ಬಹಿರಂಗ ಪಡಿಸಬೇಕೆಂದು ಬಯಸಿದಿರಿ. ಅದಕ್ಕೆ ನಾನು ಆಕ್ಷೇಪಿಸಿಲಿಲ್ಲ. ಆದರೆ, ನೀವು ಪ್ರಧಾನಿ ಮೋದಿಯವರ ಪದವಿಯ ಕುರಿತಾದ ಮಾಹಿತಿಯನ್ನು ಅಡಗಿಸಲು ಬಯಸಿರುವುದು ತನಗೆ ಅಚ್ಚರಿಯುಂಟು ಮಾಡಿದೆ’’ ಎಂದಿರುವ ಕೇಜ್ರಿವಾಲ್ ಇದು ಆಯೋಗದ ತಟಸ್ಥ ನೀತಿಯನ್ನು ಜನ ಪ್ರಶ್ನಿಸುವಂತೆ ಮಾಡಿದೆಯೆಂದು ಹೇಳಿದ್ದಾರೆ.
‘‘ಧೈರ್ಯ ತೋರಿಸುವಂತೆ ನಾನು ನಿಮ್ಮನ್ನು ಆಗ್ರಹಿಸುತ್ತಿದ್ದೇನೆ. ನನ್ನ ದಾಖಲೆಗಳನ್ನು ಬಹಿರಂಗ ಪಡಿಸುವ ವೇಳೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಂಬಂಧಿಸಿದ ದಾಖಲೆಗಳನ್ನೂ ಬಹಿರಂಗಪಡಿಸಿ’’ ಎಂದವರು ಆಯೋಗವನ್ನು ಒತ್ತಾಯಿಸಿದ್ದಾರೆ.







