ಉರ್ದು ಲೇಖಕರಿಂದ ವಿವಾದಾತ್ಮಕ ಘೋಷಣಾಪತ್ರದ ಸರಳೀಕರಣ:ಇರಾನಿ

ಹೊಸದಿಲ್ಲಿ,ಎ.28: ‘ತಪ್ಪು ತಿಳುವಳಿಕೆಯ ಯಾವುದೇ ಅವಕಾಶ ’ವನ್ನು ನಿವಾರಿಸಲು ರಾಷ್ಟ್ರೀಯ ಉರ್ದು ಭಾಷಾ ಉತ್ತೇಜನ ಮಂಡಳಿಯು ಉರ್ದು ಲೇಖಕರ ಘೋಷಣಾ ಪತ್ರವನ್ನು ‘ಸರಳಗೊಳಿಸಿದೆ’ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮತಿ ಇರಾನಿ ಅವರು ಗುರುವಾರ ರಾಜ್ಯಸಭೆಯಲ್ಲಿ ಲಿಖಿತ ಉತ್ತರವೊಂದರಲ್ಲಿ ತಿಳಿಸಿದರು. ತಮ್ಮ ಲೇಖನಗಳು ಸರಕಾರ ಅಥವಾ ದೇಶದ ವಿರುದ್ಧವಾಗಿಲ್ಲ ಎಂದು ಮುಚ್ಚಳಿಕೆ ಬರೆದು ಕೊಡುವಂತೆ ಲೇಖಕರಿಗೆ ಸೂಚಿಸಿದ ಬಳಿಕ ಮಂಡಳಿಯು ತೀವ್ರ ಟೀಕೆಗೆ ಗುರಿಯಾಗಿತ್ತು.
ಮಂಡಳಿಯು ಪುಸ್ತಕಗಳ ಸಗಟು ಖರೀದಿಗಾಗಿ ಅನುದಾನವನ್ನು ಒದಗಿಸುತ್ತದೆ ಮತ್ತು ಈ ಪ್ರಕ್ರಿಯೆಯ ಅಂಗವಾಗಿ ಅರ್ಜಿದಾರ ಲೇಖಕರು ಮುಚ್ಚಳಿಕೆಯೊಂದನ್ನು ನೀಡಬೇಕಾಗುತ್ತದೆ. ಸಚಿವಾಲಯದಡಿ ಕಾರ್ಯ ನಿರ್ವಹಿಸುತ್ತಿರುವ ಇತರ ಭಾಷಾ ಮಂಡಳಿಗಳಲ್ಲಿಯೂ ಹೀಗೆ ಮುಚ್ಚಳಿಕೆ ಪಡೆದುಕೊಳ್ಳುವ ಪದ್ಧತಿ ಅಸ್ತಿತ್ವದಲ್ಲಿದೆ ಎಂದು ಹೇಳಿದ ಸಚಿವೆ, ಕೆಲವು ದೂರುಗಳನ್ನು ಗಮನದಲ್ಲಿಟ್ಟುಕೊಂಡು ಮಂಡಳಿಯು ಈ ಘೋಷಣಾ ಪತ್ರವನ್ನು 2015,ಸೆ.1ರಂದು ತಿದ್ದುಪಡಿಗೊಳಿಸಿತ್ತು. ತಪ್ಪು ವ್ಯಾಖ್ಯಾನ ಅಥವ ತಪ್ಪು ಗ್ರಹಿಕೆಗೆ ಅವಕಾಶವಿರದಂತೆ ಮಂಡಳಿಯು ಅದನ್ನು 2016,ಎ.22ರಂದು ಸರಳಗೊಳಿಸಿದೆ ಎಂದು ವಿವರಿಸಿದರು.





