ಪ್ರೇಮ ವೈಫಲ್ಯ ಪ್ರಿಯತಮನಿಗೆ ಚೂರಿ ಇರಿತ
ಶಿವಮೊಗ್ಗ, ಎ. 28: ಹಾಡಹಗಲೇ ಸಾರ್ವಜನಿಕರ ಸಮ್ಮುಖದಲ್ಲಿಯೇ ಕಾಲೇಜು ಯುವತಿಯೋರ್ವಳು ಯುವಕನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದ ಬಸ್ ನಿಲ್ದಾಣ ಸಮೀಪ ಗುರುವಾರ ಬೆಳಡಿ ್ಗೆ ವರದಿಯಾಗಿದೆ. ತೀರ್ಥಹಳ್ಳಿ ಪಟ್ಟಣದ ಮಿಲ್‌ಕೆರಿಯ ನಿವಾಸಿ ಸುಮಂತ್ (22) ದಾಳಿಗೊಳಗಾದ ಯುವಕ ಎಂದು ಗುರುತಿಸಲಾಗಿದೆ. ಚಾಕು ಇರಿತದಿಂದ ಮುಖದ ಬಳಿ ಗಾಯವಾಗಿದ್ದು, ಆತನನ್ನು ಪಟ್ಟಣದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಮಂತ್‌ಗೆ ಯಾವುದೇ ಪ್ರಾಣಾಪಾಯವಿಲ್ಲವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ತೀರ್ಥಹಳ್ಳಿ ಪಟ್ಟಣದ ಸೊಪ್ಪುಗುಡ್ಡೆ ಏರಿಯಾದ ನಿವಾಸಿಯಾದ ಸ್ಥಳೀಯ ಕಾಲೇಜ್‌ವೊಂದರಲ್ಲಿ ಬಿಬಿಎಂ ಅಭ್ಯಾಸ ಮಾಡುತ್ತಿರುವ ಯುವತಿಯೇ ಆಪಾದಿತೆ ಎಂದು ಗುರುತಿಸಲಾಗಿದೆ. ಚಾಕುವಿನಿಂದ ಇರಿದ ನಂತರ ಯುವತಿಯು ಸ್ಥಳದಿಂದ ಪರಾರಿಯಾಗಿದ್ದಾಳೆ. ಸಾರ್ವಜನಿಕರು ಗಾಯಾಳು ಸುಮಂತ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸಬ್ ಇನ್‌ಸ್ಪೆಕ್ಟರ್ ಭರತ್‌ಕುಮಾರ್ ಮತ್ತವರ ಸಿಬ್ಬಂದಿ ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಹಾಗೆಯೇ ಗಾಯಾಳು ಯುವಕನಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಯುವತಿಯ ವಿರುದ್ಧ ದೂರು ದಾಖಲಾಗಿದೆ.
ಏನಾಯ್ತು?
ಚಾಲಕನಾಗಿ ಕೆಲಸ ಮಾಡುತ್ತಿದ್ದ ಸುಮಂತ್ ಹಾಗೂ ಆರೋಪಿತ ಯುವತಿಯು ಪರಿಚಿತರಾಗಿದ್ದು, ಕಳೆದ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ಇಬ್ಬರ ನಡುವೆ ವಿರಸ ಏರ್ಪಟ್ಟಿತ್ತು. ಸುಮಂತ್‌ನು ಯುವತಿಯನ್ನು ವಿವಾಹವಾಗಲು ನಿರಾಕರಣೆ ಮಾಡಿದ್ದ ಎನ್ನಲಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಬಸ್‌ನಿಲ್ದಾಣದ ಬಳಿ ಇವರಿಬ್ಬರ ನಡುವೆ ಗಲಾಟೆ
ಾಗಿದೆ. ತಾಳ್ಮೆ ಕಳೆದುಕೊಂಡ ಯುವತಿಯು ತನ್ನ ಬಳಿಯಿದ್ದ ಚೂರಿಯಿಂದ ಸುಮಂತ್‌ನ ಮೇಲೆ ದಾಳಿ ನಡೆಸಿದ್ದಾಳೆ ಎಂದು ಪೊಲೀಸ್ ಇಲಾಖೆಯ ಮೂಲಗಳು ಮಾಹಿತಿ ನೀಡಿದ್ದು, ಯುವತಿಯ ಬಂಧನದ ನಂತರವಷ್ಟೇ ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.







