ಸರಗಳ್ಳ ತನ ಪ್ರಕರಣ ಭೇದಿಸಿದ ಅಂಕೋಲಾ ಪೊಲೀಸರು
ಆರೋಪಿಗಳಿಗೆ ಮೇ 7ರ ವರೆಗೆ ನ್ಯಾಯಾಂಗ ಬಂಧನ
ಅಂಕೋಲಾ, ಎ.28: ಇಲ್ಲಿನ ಕಾಕರಮಠದ ನಾರಾಯಣ ದೇವಸ್ಥಾನದ ಸಮೀಪ ಎ.24ರಂದು ರಾತ್ರಿ ಪಟ್ಟಣದಿಂದ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಬೈಕ್‌ನಲ್ಲಿ ಬಂದು ಮಹಿಳೆಯೋರ್ವರ ಮಂಗಳಸೂತ್ರ ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ಮೇ 7ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮಂಗಳಸೂತ್ರ ಅಪಹರಣ ಮಾಡಿದ ಸಿಂಗನಮಕ್ಕಿಯ ಸಚಿನ್ ಸುರೇಶ್ ಗೌಡ, ರಾಘವೇಂದ್ರ ಶೇಷು ಗೌಡ ಅಪಹರಿಸಿದ ಬಂಗಾರವನ್ನು ಖರೀದಿಸಿದ ಪ್ರದೀಪ್ ವಿನಾಯಕ ರಾಯ್ಕರ ನ್ಯಾಯಾಂಗ ಬಂಧನಕ್ಕೊಳಗಾದ ಆರೋಪಿಗಳಾಗಿರುತ್ತಾರೆ. ಪೊಲೀಸ್ ತನಿಖೆಯಿಂದ ಗೋಕರ್ಣದಲ್ಲಿ ನಡೆದ ಸರಗಳ್ಳತನದಲ್ಲಿಯು ಆರೋಪಿಗಳು: ಪ್ರಕರಣದ ಕುರಿತು ಆರೋಪಿಗಳನ್ನು ಹೆಚ್ಚಿನ ತನಿಖೆಗೆ ಒಳಪಡಿಸಿ ಎಂದು ಡಿ.ಎಸ್ಪಿ ಎನ್.ಟಿ. ಪ್ರಮೋದರಾವ್ ಸೂಚಿಸಿದರು. ಇವರ ಆದೇಶದ ಮೇರೆಗೆ ಪಿಐ ಅರುಣಕುಮಾರ ಕೋಳೂರ ಅವರು ಸಚಿನ್ ಗೌಡ, ರಾಘವೇಂದ್ರ ಗೌಡ ಹಾಗೂ ಪ್ರದೀಪ ರಾಯ್ಕರನನ್ನು ಪುನಃ ತನಿಖೆಗೆ ಒಳಪಡಿಸಿದಾಗ ಗೋಕರ್ಣದಲ್ಲಿ ಇದೇ ರೀತಿ ಕೃತ್ಯ ಮಾಡಿರುವ ಕುರಿತು ಒಪ್ಪಿಕೊಂಡಿದ್ದಾರೆ.
ಕಳೆದ ಮಾ.13ರಂದು ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭೀಮ ಕೊಂಡ ಸಮೀಪ ರಾತ್ರಿ ನಡೆದುಕೊಂಡು ಹೋಗುತ್ತಿದ್ದ ಯಮುನಾ ಗಣಪತಿ ಜೋಶಿ ಎಂಬವರ ಮಂಗಳಸೂತ್ರ ಮತ್ತು ಹವಳ ಸರ ಅಪಹರಿಸಿದ ಕೃತ್ಯವನ್ನು ಇದೇ ಆರೋಪಿಗಳು ನಡೆಸಿದ್ದಾರೆ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ. ಪಿಐ ಅರುಣಕುಮಾರ ಕೋಳೂರ ಅವರ ಮಾರ್ಗದರ್ಶನದಲ್ಲಿ ಪಿಎಸ್ಸೈ ಎಚ್.ಓಂಕಾರಪ್ಪ ನೇತೃತ್ವ ದಲ್ಲಿ ತಂಡವನ್ನು ರಚನೆ ಮಾಡಿ ಆರೋಪಿಗಳನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಎಎಸ್ಸೈಗಳಾದ ವಸಂತ ನಾಯ್ಕ, ಸಿಬ್ಬಂದಿಯರಾದ ವಸಂತ ನಾಯ್ಕ, ಹುಸೈನ್ ಕೆರೂರು, ಗೋಕರ್ಣನಾಥ ರಾಣೆ, ಮದರಸಾಬ್ ಚಿಕ್ಕೇರಿ, ವಿಜಯ ರಾಠೋಡ, ರಾಜೇಶ ನಾಯ್ಕ ಪಾಲ್ಗೊಂಡಿದ್ದರು. ಗೋಕರ್ಣದಲ್ಲಿ ಮಾ.13 ರಂದು ರಾತ್ರಿ ನಡೆದ ಸರಗಳ್ಳತನ ಪ್ರಕರಣದ ಆರೋಪಿಗಳಾದ ಸಚಿನ್ ಗೌಡ, ರಾಘವೇಂದ್ರ ಗೌಡ ಹಾಗೂ ಪ್ರದೀಪ ರಾಯ್ಕರ ಇವರನ್ನು ಹೆಚ್ಚಿನ ತನಿಖೆಗಾಗಿ ಕುಮಟಾ ಸಿ.ಪಿ.ಐ. ನರಸಿಂಹ ಮೂರ್ತಿ ಅವರ ಸೂಚನೆ ಮೇರೆಗೆ ಗೋಕರ್ಣ ಪೊಲೀಸ್ ಠಾಣೆ ಕಸ್ಟಡಿಗೆ ಪಡೆಯಲು ಅಂಕೋಲಾ ನ್ಯಾಯಾಲಯದ ಅನುಮತಿ ಪಡೆಯಲು ಈಗಾಗಲೇ ನ್ಯಾಯಾಲಯದಲ್ಲಿ ಅರ್ಜಿ ಕೋರಿದ್ದೇವೆ._ -ಗೋವಿಂದ ಬಿ. ಎಂ. ಪಿಎಸ್ಸೈ, ಗೋಕರ್ಣ.







