ಜಾತಿ ವ್ಯವಸ್ಥೆಯಿಂದ ಸಮಾನ ಸಮಾಜ ನಿರ್ಮಾಣ ಅಸಾಧ್ಯ: ಸತ್ಯ ಭದ್ರಾವತಿ
ಸಾಗರ,ಎ.28: ರಾಜ್ಯದಲ್ಲಿ ಸುಮಾರು 1.50 ಕೋಟಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ಇದ್ದಾರೆ. ಆದರೆ ಅವರಿಗೆ ಶೇ. 18ರಷ್ಟು ಸೌಲಭ್ಯಗಳನ್ನು ನೀಡಿ ವಂಚಿಸಲಾಗುತ್ತಿದೆ. ಜನಸಂಖ್ಯೆಗೆ ಅನುಗುಣವಾಗಿ ನಮಗೆ ಸಿಗಬೇಕಾದ ಸವಲತ್ತುಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಆಳುವವರು ಗಮನ ಹರಿಸಬೇಕು ಎಂದು ರಾಜ್ಯ ದಲಿತ ಸಂಘರ್ಷ ಸಮಿತಿ ಸಂಚಾಲಕ ಸತ್ಯ ಭದ್ರಾವತಿ ಹೇಳಿದ್ದಾರೆ. ಇಲ್ಲಿನ ಡಿಎಸ್ಸೆಸ್ ಸಭಾಭವನದಲ್ಲಿ ಗುರುವಾರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಬಣ) ಸಾಗರ ಶಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರು 125ನೆ ಜನ್ಮದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸಂವಿಧಾನ ಯಥಾವತ್ತು ಜಾರಿಯಾಗುವವರೆಗೂ ಮತ್ತು ಆಸ್ತಿಹಕ್ಕು ಇರುವವರೆಗೂ ದೇಶದಲ್ಲಿ ಸಮಾನತೆ ಬರುವುದಿಲ್ಲ ಎನ್ನುವುದನ್ನು ಅಂಬೇಡ್ಕರ್ ಪ್ರತಿಪಾದಿಸಿದ್ದರು. ಇಂದಿಗೂ ದೇಶದಲ್ಲಿ ಜಾತಿವ್ಯವಸ್ಥೆ ಇದೆ. ಜಾತಿ ವ್ಯವಸ್ಥೆ ಇರುವುದರಿಂದ ಪ್ರಗತಿ ಕುಂಠಿತವಾಗುತ್ತಿರುವ ಜೊತೆಗೆ ನಾವು ಸಮಾನ ಸಮಾಜವನ್ನು ನೋಡಲು ಸಾಧ್ಯವಾಗುತ್ತಿಲ್ಲ ಎಂದರು. ಮೇ14ರಂದು ಶಿವಮೊಗ್ಗದ ಅಂಬೇಡ್ಕರ್ ಭವನದಲ್ಲಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ನಡೆಸಲು ಸಿದ್ಧ್ದತೆ ನಡೆಸಲಾಗಿದೆ ಎಂದು ತಿಳಿಸಿದರು. ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಉಪವಿಭಾಗಾಧಿಕಾರಿ ಡಿ.ಎಂ.ಸತೀಶಕುಮಾರ್ ಮಾತನಾಡಿದರು. ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಲಕ್ಷ್ಮಣ ಸಾಗರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷ ಆರ್.ಗಣಾಧೀಶ್, ಸ್ಥಾಯಿ ಸಮಿತಿ ಅಧ್ಯಕ್ಷ ಎನ್.ಶ್ರೀನಾಥ್, ಸದಸ್ಯ ಶ್ರೀನಿವಾಸ್ ಮೇಸ್ತ್ರಿ, ಜಿಲ್ಲಾ ಸಂಚಾಲಕ ಚಿನ್ನಪ್ಪ, ವಿಭಾಗೀಯ ಸಂಚಾಲಕ ರಾಜೇಂದ್ರ ಬಂದಗದ್ದೆ, ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಬಿ.ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.





