ಗೋದಾಮುಗಳ ಬದಲು ‘ಗುಡಾಣ’ ನಿರ್ಮಾಣ

ಬೆಂಗಳೂರು, ಎ.28: ಆಹಾರಧಾನ್ಯಗಳ ಸಂಗ್ರಹಣೆಗೆ ಗೋದಾಮುಗಳ ಬದಲು ಬೃಹತ್ ಗಾತ್ರದ ಗುಡಾಣ(ಸೈಲೋ)ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ತೋಟಗಾರಿಕೆ ಸಚಿವ ಡಾ.ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಮೆಟ್ರಿಕ್‌ಟನ್ ಸಾಮರ್ಥ್ಯದ ಗುಡಾಣ ನಿರ್ಮಾಣಕ್ಕೆ 12,500 ರೂ.ವೆಚ್ಚ ವಾಗುತ್ತದೆ. ರೈತರು ಸ್ವಂತ ಖರ್ಚಿಯಲ್ಲಿ ಇದನ್ನು ನಿರ್ಮಿಸಿಕೊಳ್ಳಬಹುದಾಗಿದೆ. ಪ್ರಾಯೋಗಿಕವಾಗಿ ಗಂಗಾವತಿ, ಯಾದಗಿರಿ, ಕಲಬುರಗಿ ಹಾಗೂ ದಾವಣಗೆರೆಯಲ್ಲಿ ಗುಡಾಣಗಳನ್ನು ನಿರ್ಮಿಸಲಾಗುವುದು ಎಂದರು.
ರಾಜ್ಯದ 10 ಎಪಿಎಂಸಿ ಮಾರುಕಟ್ಟೆಗಳಲ್ಲಿ ಯಂತ್ರೋಪಕರಣ ಆಧಾರಿತ ಕಸ ವಿಲೇವಾರಿ ಘಟಕಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಅಲ್ಲದೆ, ಆಲೂಗಡ್ಡೆ, ಟೊಮ್ಯಾಟೊ, ಹಣ್ಣುಗಳನ್ನು ಆಧುನಿಕ ತಂತ್ರಜ್ಞಾನ ಆಧಾರಿತ ಶೀತಲಗೃಹಗಳಲ್ಲಿ ದಾಸ್ತಾನು ಮಾಡುವುದರಿಂದ ಕನಿಷ್ಠ 6 ತಿಂಗಳವರೆಗೆ ಬೆಳೆಗಳನ್ನು ಸಂರಕ್ಷಿಸಿಡಬಹುದು ಎಂದು ಅವರು ಹೇಳಿದರು.
ಕೋಲಾರ, ದಾವಣಗೆರೆ, ಚಳ್ಳಕೆರೆ ಹಾಗೂ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಇಂತಹ ಆಧುನಿಕ ತಂತ್ರಜ್ಞಾನ ಆಧಾರಿತ ಶೀತಲಗೃಹಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ. ಎಪಿಎಂಪಿಸಿ ಮಾರುಕಟ್ಟ್ಟೆಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದ್ದು, ರೈತರು ಹಾಗೂ ಬೆಳೆಗಾರರಿಗೆ ಆಗುವ ವಂಚನೆ ತಡೆಯಲು ಎಲೆಕ್ಟ್ರಾನಿಕ್ ಮಾಪನ ಯಂತ್ರಗಳ ಅಳವಡಿಕೆ ಮಾಡಲಾಗುತ್ತಿದೆ ಎಂದು ಶಾಮನೂರು ಶಿವಶಂಕರಪ್ಪ ತಿಳಿಸಿದರು.
ಬರ ಪರಿಸ್ಥಿತಿ ನಿರ್ವಹಣೆ: ದಾವಣಗೆರೆ ನಗರದಲ್ಲಿ ನೀರು ಸರಬರಾಜುಗೆ ತೊಂದರೆಯಿಲ್ಲ. ಭದ್ರಾ ಜಲಾಶಯದಿಂದ ಇನ್ನೆರಡು ದಿನಗಳಲ್ಲಿ ನೀರು ಬಿಡುಗಡೆಯಾಗುತ್ತದೆ, ಇದರಿಂದಾಗಿ ನಗರದಲ್ಲಿರುವ ಎರಡು ಪ್ರಮುಖ ಕೆರೆಗಳನ್ನು ತುಂಬಿಸಿಕೊಳ್ಳಲಾಗುವುದು. ಕನಿಷ್ಠ ಮೂರು ತಿಂಗಳವರೆಗೆ ಯಾವುದೇ ಸಮಸ್ಯೆಯಿರುವುದಿಲ್ಲ ಎಂದು ಅವರುಹೇಳಿದರು.
ಆದರೆ, ಹರಪ್ಪನಹಳ್ಳಿ ಹಾಗೂ ಜಗಳೂರಿನಲ್ಲಿ ಮಾತ್ರ ಸಮಸ್ಯೆಯಿದೆ. ಈ ಹಿನ್ನೆಲೆಯಲ್ಲಿ ತಾಲೂಕು ಕೇಂದ್ರಗಳು ಹಾಗೂ ಪ್ರತಿ ಹಳ್ಳಿಗಳಲ್ಲಿ 30-40 ಸಾವಿರ ರೂ.ಖರ್ಚು ಮಾಡಿ ಜಾನುವಾರುಗಳಿಗೆ ನೀರು ಕುಡಿಯಲು ಅನುಕೂಲವಾಗುವಂತೆ ನೀರಿನ ತೊಟ್ಟಿಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಬರಗಾಲದಿಂದಾಗಿ ಮಾವು ಸೇರಿದಂತೆ ಇನ್ನಿತರ ತೋಟಗಾರಿಕೆ ಬೆಳೆಗಳ ಉತ್ಪಾದನೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಇಳಿಮುಖವಾಗುವ ಸಾಧ್ಯತೆಯಿದೆ ಎಂದು ಶಾಮನೂರು ಶಿವಶಂಕರಪ್ಪ ಅಭಿಪ್ರಾಯಪಟ್ಟರು.





