ಪಾಕ್‌ನ ಕಳಪೆ ಪ್ರದರ್ಶನಕ್ಕೆ ಅಫ್ರಿದಿಯೇ ಕಾರಣ: ವಕಾರ್

ಕರಾಚಿ, ಎ.28: ಏಷ್ಯಾಕಪ್ ಹಾಗೂ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡದ ಸೋಲಿಗೆ ನಾಯಕ ಶಾಹಿದ್ ಅಫ್ರಿದಿ ನೇರ ಹೊಣೆ ಎಂದಿರುವ ಮಾಜಿ ಕ್ರಿಕೆಟ್ ಕೋಚ್ ವಕಾರ್ ಯೂನಿಸ್, ಪಾಕಿಸ್ತಾನ ತಂಡದಿಂದ ಉಮರ್ ಅಕ್ಮಲ್‌ರನ್ನು ಕೈಬಿಡಬೇಕು ಎಂದು ಕ್ರಿಕೆಟ್ ಮಂಡಳಿಯನ್ನು ಆಗ್ರಹಿಸಿದ್ದಾರೆ.
ಎರಡು ವರ್ಷಗಳ ಕಾಲ ಪಾಕ್ ತಂಡದ ಕೋಚ್ ಆಗಿದ್ದ ಅವಧಿಯ ವರದಿಯನ್ನು ಸಿದ್ಧಪಡಿಸಿರುವ ವಕಾರ್, ಪಾಕ್ ತಂಡದ ಇತ್ತೀಚೆಗಿನ ಕಳಪೆ ಪ್ರದರ್ಶನಕ್ಕೆ ಆಲ್‌ರೌಂಡರ್ ಅಫ್ರಿದಿಯ ಕಳಪೆ ಫಾರ್ಮ್, ದುರ್ಬಲ ನಾಯಕತ್ವ ಹಾಗೂ ಕಠಿಣ ನಿಲುವೇ ಕಾರಣ ಎಂದು ಹೇಳಿದ್ದಾರೆ.
ಆಗಿನ ತಂಡದ ಆಯ್ಕೆಗಾರ ಹರೂನ್ ರಶೀದ್ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯಕ್ಕೆ ತಂಡವನ್ನು ಸೇರಿಕೊಳ್ಳುವಂತೆ ಉಮರ್ ಅಕ್ಮಲ್‌ಗೆ ತಿಳಿಸಿದ್ದರು. ಆದರೆ, ಅವರು ಯಾರಿಗೂ ಮಾಹಿತಿ ನೀಡದೇ ಪ್ರೀಮಿಯರ್ ಲೀಗ್‌ನ್ನು ಆಡಲು ವೆಸ್ಟ್‌ಇಂಡೀಸ್ ವಿಮಾನವೇರಿದ್ದರು. ಆ್ಯಂಡ್ರೂ ಸೈಮಂಡ್ಸ್ ಹಾಗೂ ಕೇವಿನ್ ಪೀಟರ್ಸನ್ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯದ ಪ್ರತಿಭಾವಂತ ಆಟಗಾರರಾಗಿದ್ದರು. ಅವರನ್ನು ದುರ್ನಡತೆಯ ಕಾರಣಕ್ಕೆ ತಂಡದಿಂದ ಹೊರ ಹಾಕಲಾಗಿತ್ತು. ಅಕ್ಮಲ್‌ರನ್ನು ಅದೇ ರೀತಿ ಮಾಡಬೇಕು’’ ಎಂದು ವಕಾರ್ ತನ್ನ ಸುದೀರ್ಫ ವರದಿಯಲ್ಲಿ ತಿಳಿಸಿದ್ದಾರೆ.
‘‘ಏಷ್ಯಾಕಪ್ ಹಾಗೂ ಟ್ವೆಂಟಿ-20 ವಿಶ್ವಕಪ್‌ನಲ್ಲಿ ನಮ್ಮ ತಂಡ ನ್ಯೂಝಿಲೆಂಡ್ ವಿರುದ್ಧ ಸೋತಿರುವುದಕ್ಕೆ ಕಳಪೆ ನಾಯಕತ್ವ ಕಾರಣವಾಗಿತ್ತು. ಅಫ್ರಿದಿ ಬ್ಯಾಟಿಂಗ್, ಬೌಲಿಂಗ್ ಹಾಗೂ ನಾಯಕತ್ವದಲ್ಲಿ ವಿಫಲರಾಗಿದ್ದಾರೆ ಎಂದು ನಾನು ಹಲವು ಬಾರಿ ಸ್ಪಷ್ಟಪಡಿಸಿದ್ದೆ. ಕಳಪೆ ರಣತಂತ್ರ ದುಬಾರಿ ಆಗಿ ಪರಿಣಮಿಸಿತ್ತು. ಅಫ್ರಿದಿ ತಂಡದ ಕೆಲವು ಸಭೆಗೆ ಹಾಜರಾಗಿರಲಿಲ್ಲ’’ಎಂದು ವಕಾರ್ ಹೇಳಿದ್ದಾರೆ.







