ಜೆಇಇ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರೂ ಆತ್ಮಹತ್ಯೆಗೆ ಶರಣಾದ 17ರ ಬಾಲಕಿ ಇಂಜಿನಿಯರ್ ಆಗಲು ನಿರಾಸಕ್ತಿ
ಕೋಟಾ(ರಾಜಸ್ಥಾನ),ಎ.28: 17ರ ಹರೆಯದ ಕೃತಿ ತ್ರಿಪಾಠಿ ಬುಧವಾರವಷ್ಟೇ ಐಐಟಿ-ಜೆಇಇ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದಳು. ಆದರೆ ಓದಿ ಇಂಜಿನಿಯರ್ ಆಗಲು ಎಳ್ಳಷ್ಟೂ ಮನಸ್ಸಿಲ್ಲದಿದ್ದ ಈ ಬಾಲಕಿ ಗುರುವಾರ ಇಲ್ಲಿಯ ಐದಂತಸ್ತಿನ ಕಟ್ಟಡದಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕೃತಿ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣಗಳನ್ನು ವಿವರಿಸಿ ಬರೆದಿಟ್ಟಿದ್ದ ಪತ್ರ ಪೊಲೀಸರ ವಶದಲ್ಲಿದೆ.
ಘಾಝಿಯಾಬಾದ್‌ನ ಕೃತಿ ಪ್ರತಿಷ್ಠಿತ ಐಐಟಿಗಳಲ್ಲಿ ಪ್ರವೇಶದ ದ್ವಾರಗಳನ್ನು ತೆರೆಯುವ ಐಐಟಿ-ಜೆಇಇ ಪರೀಕ್ಷೆಗೆ ತರಬೇತಿ ಪಡೆಯಲು ಇಲ್ಲಿಯ ಕೋಚಿಂಗ್ ಸೆಂಟರ್‌ಗೆ ಸೇರಿಕೊಂಡಿದ್ದಳು. ಅವಳೊಂದಿಗೆ ಹೆತ್ತವರೂ ಕೋಟಾದಲ್ಲಿಯೇ ವಾಸವಿದ್ದರಾದರೂ, ತಾಯಿ ಐದು ತಿಂಗಳ ಹಿಂದಷ್ಟೇ ಊರಿಗೆ ಮರಳಿದ್ದಳು. ಆಕೆ ಕಟ್ಟಡದಿಂದ ಜಿಗಿದಾಗ ತಂದೆ ಹೊರಗೆ ಹೋಗಿದ್ದರು.
ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ತೇರ್ಗಡೆಗೊಳ್ಳಲು ಕನಿಷ್ಠ 100 ಅಂಕಗಳನ್ನು ನಿಗದಿಗೊಳಿಸಲಾಗಿತ್ತಾದರೂ ಕೃತಿ 144 ಅಂಕಗಳನ್ನು ಗಳಿಸಿದ್ದಳು.
ಖಿನ್ನತೆ ಮತ್ತು ಎಂಜಿನಿಯರಿಂಗ್ ಓದಿನಲ್ಲಿ ನಿರಾಸಕ್ತಿ ಕೃತಿಯ ಆತ್ಮಹತ್ಯೆಗೆ ಕಾರಣವಾಗಿರುವಂತಿದೆ. ತನ್ನ ತಾಯಿ ತನ್ನನ್ನು ಪಿಯುಸಿ ವಿಜ್ಞಾನ ವಿಭಾಗಕ್ಕೆ ಸೇರಿಸಿದ್ದಳು, ಆದರೆ ಭೌತಶಾಸ್ತ್ರ, ಗಣಿತ ಮತ್ತು ರಸಾಯನ ಶಾಸ್ತ್ರದಂತಹ ವಿಷಯಗಳಲ್ಲಿ ತನಗೆ ಆಸಕ್ತಿಯಿರಲಿಲ್ಲ ಎಂದು ಆಕೆ ತನ್ನ ಆತ್ಮಹತ್ಯಾ ಪತ್ರದಲ್ಲಿ ಉಲ್ಲೇಖಿಸಿದ್ದಾಳೆ ಎಂದು ಕೋಟಾ ಎಸ್‌ಪಿ ಎಸ್.ಎಸ್.ಗೋದಾರ ತಿಳಿಸಿದರು.
ದೇಶದಲ್ಲಿಯೇ ಅತ್ಯಂತ ಕಠಿಣ ಪರೀಕ್ಷೆಗಳಲ್ಲೊಂದಾಗಿರುವ ಐಐಟಿ-ಜೆಇಇ ಸೇರಿದಂತೆ ವಿವಿಧ ಪರೀಕ್ಷೆಗಳ ಕೋಚಿಂಗ್ ಸೆಂಟರ್‌ಗಳಿಗಾಗಿ ಪ್ರಸಿದ್ಧಿ ಪಡೆದಿರುವ ಕೋಟಾದಲ್ಲಿ ಇದು ಒಂದು ವರ್ಷದ ಅವಧಿಯಲ್ಲಿ ಸಂಭವಿಸಿರುವ ಐದನೇ ಆತ್ಮಹತ್ಯೆ ಪ್ರಕರಣವಾಗಿದೆ. ವೈಫಲ್ಯದ ಭೀತಿ ಮತ್ತು ಕುಟುಂಬದಿಂದ ನಿರೀಕ್ಷೆಗಳ ಹೊರೆ ಹೆಚ್ಚಿನ ಆತ್ಮಹತ್ಯೆಗಳಿಗೆ ಕಾರಣವೆನ್ನುವುದು ತಜ್ಞರ ಅಭಿಪ್ರಾಯವಾಗಿದೆ.
ಈ ವರ್ಷ ಕೋಟಾದ ವಿವಿಧ ಕೋಚಿಂಗ್ ಸೆಂಟರ್‌ಗಳ ಮೂಲಕ ಸುಮಾರು 35,000 ವಿದ್ಯಾರ್ಥಿಗಳು ಐಐಟಿ-ಜೆಇಇ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದಾರೆ. ಪ್ರತಿವರ್ಷ ದೇಶಾದ್ಯಂತದಿಂದ ಸುಮಾರು 1.5 ಲಕ್ಷ ವಿದ್ಯಾರ್ಥಿಗಳು ಇಲ್ಲಿಯ ಕೋಚಿಂಗ್ ಸೆಂಟರ್‌ಗಳಿಗೆ ದಾಖಲಾಗುತ್ತಾರೆ.
ಕಳೆದ ಐದು ವರ್ಷಗಳಲ್ಲಿ ಕನಿಷ್ಠ 56 ವಿದ್ಯಾರ್ಥಿಗಳು ಇಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪರೀಕ್ಷೆಯಲ್ಲಿ ವಿಫಲಗೊಳ್ಳುವ ಭೀತಿ ಹೆಚ್ಚಿನ ಆತ್ಮಹತ್ಯೆಗಳಿಗೆ ಕಾರಣವೆನ್ನಲಾಗಿದೆ.





