ಸಿರಿಯ ಯುದ್ಧ ವಿರಾಮಕ್ಕೆ ಜೀವ ತುಂಬೋಣ
ವಿಶ್ವಸಂಸ್ಥೆ ಪ್ರತಿನಿಧಿ ಕರೆ
ಜಿನೇವ, ಎ. 28: ಸಿರಿಯದ ಯುದ್ಧವಿರಾಮವನ್ನು ಮುಂದುವರಿಸುವ ನಿಟ್ಟಿನಲ್ಲಿ ತಾನು ಮುಂದಿನ ತಿಂಗಳು ಇನ್ನೊಂದು ಸುತ್ತಿನ ಶಾಂತಿ ಮಾತುಕತೆಯನ್ನು ಏರ್ಪಡಿಸುವ ಯೋಜನೆ ಹಾಕಿದ್ದೇನೆ ಎಂದು ಸಿರಿಯಕ್ಕೆ ವಿಶ್ವಸಂಸ್ಥೆಯ ರಾಯಭಾರಿ ಸ್ಟಾಫನ್ ಡಿ ಮಿಸ್ಟುರ ಗುರುವಾರ ತಿಳಿಸಿದರು.
ಅದೇ ವೇಳೆ, ಮುಂದಿನ ಸುತ್ತಿನ ಮಾತುಕತೆಗೆ ದಿನಾಂಕ ನಿಗದಿಪಡಿಸುವ ಮೊದಲು ಸಿರಿಯದಲ್ಲಿ ಅಪಾಯದಲ್ಲಿರುವ ಯುದ್ಧವಿರಾಮಕ್ಕೆ ಜೀವ ತುಂಬಬೇಕಾಗಿದೆ ಎಂದರು.
ಸಿರಿಯದಲ್ಲಿ ಮತ್ತೆ ಉಲ್ಬಣಿಸಿರುವ ಆಂತರಿಕ ಯುದ್ಧದಲ್ಲಿ ಭಾರೀ ಸಂಖ್ಯೆಯಲ್ಲಿ ನಾಗರಿಕರು ಪ್ರಾಣ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಕೆಲವು ಬಂಡುಕೋರ ಗುಂಪುಗಳನ್ನು ಬೆಂಬಲಿಸುವ ಅಮೆರಿಕ ಮತ್ತು ಸಿರಿಯ ಸರಕಾರದ ಮಿತ್ರ ಪಕ್ಷ ರಶ್ಯ ಈ ನಿಟ್ಟಿನಲ್ಲಿ ಮುತುವರ್ಜಿ ವಹಿಸಬೇಕಾಗಿದೆ ಎಂದು ಹೇಳಿದ ಅವರು, ಮಾತುಕತೆಗಳು ಪುನಾರಂಭಗೊಳ್ಳುವ ಮುನ್ನ ಉನ್ನತ ಮಟ್ಟದ ಸಭೆಯೊಂದನ್ನು ಸಿರಿಯಾದೊಂದಿಗೆ ಏರ್ಪಡಿಸುವಂತೆ ಅವುಗಳಿಗೆ ಕರೆ ನೀಡಿದರು.
ಇತ್ತೀಚಿನ ಮಾತುಕತೆಗಳ ಬಳಿಕ ಈಗ ವಿರಾಮ ಏರ್ಪಟ್ಟಿದ್ದು, ಈವರೆಗಿನ ಮಾತುಕತೆಯಲ್ಲಿ ಗಳಿಸಿದ ಫಲಿತಾಂಶವನ್ನು ವೃದ್ಧಿಗೊಳಿಸುವುದಕ್ಕಾಗಿ ಮೇ ತಿಂಗಳ ಅವಧಿಯಲ್ಲಿ ಮಾತುಕತೆಗೆ ಹೊಸ ದಿನಾಂಕ ನಿಗದಿಯಾಗಬೇಕು ಎಂದು ತಾನು ಬಯಸುವುದಾಗಿ ಮಿಸ್ಟುರ ಹೇಳಿದರು.





