ರಶ್ಯ: ಅಂತಾರಾಷ್ಟ್ರೀಯ ಮರಳು ಶಿಲ್ಪ ಸ್ಪರ್ಧೆ
ಸುದರ್ಶನ ಪಟ್ನಾಯಕ್‌ಗೆ ಚಿನ್ನದ ಪದಕ
ಹೊಸದಿಲ್ಲಿ, ಎ.28: ಖ್ಯಾತ ಮರಳು ಕಲಾವಿದ, ಪದ್ಮ ಪ್ರಶಸ್ತಿ ಪುರಸ್ಕೃತ ಸುದರ್ಶನ ಪಟ್ನಾಯಕ್ ರಶ್ಯದಲ್ಲಿ ಬುಧವಾರ ನಡೆದ ಅಂತಾರಾಷ್ಟ್ರೀಯ ಮರಳು ಕಲೆ ಸ್ಪರ್ಧೆಯೊಂದರಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.
ಸ್ಪರ್ಧೆಯಲ್ಲಿ ಅವರು ‘ಅಹಿಂಸೆ ಮತ್ತು ಶಾಂತಿಗಾಗಿ ಮಹಾತ್ಮಾಗಾಂಧಿಯವರ ಪ್ರತಿಮೆ’ ಎಂಬ ಕಲಾಕೃತಿ ರಚಿಸಿದ್ದರು.
ಚಾಂಪಿಯನ್‌ಶಿಪ್‌ನಲ್ಲಿ ತಾನು ಚಿನ್ನದ ಪದಕ ಗೆದ್ದಿದ್ದೇನೆ. ಇದು ತನಗೆ ಹೆಮ್ಮೆಯ ಕ್ಷಣವಾಗಿದೆಯೆಂದು ಪಟ್ನಾಯಕ್ ಮಾಸ್ಕೊದಲ್ಲಿ ಪಿಟಿಐಗೆ ತಿಳಿಸಿದ್ದಾರೆ.
ಮಾಸ್ಕೊದ ಕೊಲೊಮೆನ್‌ಸ್ಕೋಯೆಯಲ್ಲಿ ಎ.21ರಂದು ಈ ವಾರದುದ್ದದ ಸ್ಪರ್ಧೆ ಆರಂಭವಾಗಿತ್ತೆಂದು ಅವರು ಹೇಳಿದ್ದಾರೆ.
ವಿಶ್ವಾದ್ಯಂತದ 20 ಮಂದಿ ಅಗ್ರ ಮರಳು ಕಲಾವಿದರು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದ್ದರು. ಪಟ್ನಾಯಕ್, 50ರಷ್ಟು ಹೆಚ್ಚು ಅಂತಾರಾಷ್ಟ್ರೀಯ ಮರಳು ಶಿಲ್ಪ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು, ದೇಶಕ್ಕೆ ಅನೇಕ ಪ್ರಶಸ್ತಿಗಳನ್ನು ಗೆದ್ದುಕೊಟ್ಟಿದ್ದಾರೆ.
2014ರಲ್ಲಿ ಅವರಿಗೆ 4ನೆ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿರುವ ‘ಪದ್ಮಶ್ರೀ’ಯನ್ನು ಪ್ರದಾನಿಸಲಾಗಿದೆ. ಒಡಿಶಾದ ಪುರಿಕಡಲ ತೀರದಲ್ಲಿ ಪಟ್ನಾಯಕ್ ಮರಳು ಕಲೆಯ ಶಾಲೆಯೊಂದನ್ನು ನಡೆಸುತ್ತಿದ್ದಾರೆ.





