ಚರ್ಚ್‌ನಲ್ಲಿ ಮದುವೆ ನಿಲ್ಲಿಸಲು ಬಜರಂಗದಳ, ಪೊಲೀಸ್ ಜಂಟಿ ಕಾರ್ಯಾಚರಣೆ!
ಭೋಪಾಲ್, ಎ.28; ಮಧ್ಯಪ್ರದೇಶದ ಸಾತ್ನಾ ಜಿಲ್ಲೆಯ ಚರ್ಚ್ ಒಂದರಲ್ಲಿ ನಡೆಯುತ್ತಿದ್ದ ವಿವಾಹವನ್ನು ನಿಲ್ಲಿಸಲು ಪೊಲೀಸರು ಹಾಗೂ ಬಜರಂಗದಳ ಕಾರ್ಯಕರ್ತರು ಜಂಟಿ ಕಾರ್ಯಾಚರಣೆ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ. ವರನನ್ನು ಅಕ್ರಮವಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರಿಸಲಾಗಿದೆ ಎಂದು ಆಪಾದಿಸಿ, ಬಜರಂಗದಳ ಕಾರ್ಯಕರ್ತರು ನೀಡಿದ ದೂರಿನ ಮೇರೆಗೆ ಈ ಜಂಟಿ ಕಾರ್ಯಾಚರಣೆ ನಡೆದಿದೆ.
ಬಜರಂಗದಳ ಕಾರ್ಯಕರ್ತರ ನೆರವಿನೊಂದಿಗೆ ಚರ್ಚ್ ಆಫ್ ಗಾಡ್ ಇನ್ ಇಂಡಿಯಾ ಪ್ರವೇಶಿಸಿದ ಕೆಲಗವಾನ ಪೊಲೀಸರ ತಂಡ ಧರ್ಮಗುರು ಸ್ಯಾಮ್ ಸ್ಯಾಮುವೆಲ್, ವಧುವಿನ ಪೋಷಕರು ಸೇರಿದಂತೆ ಹತ್ತು ಮಂದಿಯನ್ನು ಬಂಧಿಸಿದೆ.
ವಧು ಇಲ್ಲಿ ಅಪ್ರಾಪ್ತ ವಯಸ್ಸಿನವಳಾಗಿದ್ದು, 18 ವರ್ಷ ತುಂಬಲು 10 ದಿನ ಬಾಕಿ ಇದೆ. ವಧು ಹಾಗೂ ವರ ನಾಲ್ಕು ವರ್ಷದ ಹಿಂದೆ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದಾರೆ. ಆದರೆ ಈ ಬಗ್ಗೆ ಜಿಲ್ಲಾ ಅಧಿಕಾರಿಗಳಿಗೆ ಮಾಹಿತಿ ಇರಲಿಲ್ಲ. ಇದು ರಾಜ್ಯ ಸರಕಾರದ ಮತಾಂತರ ವಿರೋಧಿ ಶಾಸನಕ್ಕೆ ವಿರುದ್ಧವಾದುದು ಎಂದು ಸಾತ್ನಾ ಸಿಎಸ್‌ಪಿ ಸೀತಾರಾಂ ಯಾದವ್ ವಿವರಿಸಿದರು. ಜಿಲ್ಲಾ ಎಸ್ಪಿ ಮಿತಿಲೇಶ್ ಶುಕ್ಲಾ ಅವರು, ವಧು ಹಿಂದೂ ಧರ್ಮಕ್ಕೆ ಸೇರಿದವರು ಹಾಗೂ ಅಪ್ರಾಪ್ತ ವಯಸ್ಸಿನವಳು ಎಂದು ಹೇಳಿದ್ದಾರೆ.
ಕುಶ್ವಾಹ ಸಮುದಾಯದ ಸದಸ್ಯರನ್ನು ಕ್ರೈಸ್ತಧರ್ಮಕ್ಕೆ ಮತಾಂತರಿಸಲಾಗುತ್ತದೆ ಎಂದು ಬಜರಂಗದಳ ದೂರು ನೀಡಿತ್ತು. ಈ ಬಗ್ಗೆ ವಧುವಿನ ಮಾವ ನೀಡಿದ ದೂರನ್ನೂ ದಾಖಲಿಸಲಾಗಿದೆ. ವಧುವಿನ ತಂದೆ ಮಾನಸಿಕವಾಗಿ ಸ್ವಸ್ಥರಾಗಿಲ್ಲ. ವರ ಅಜಯ್ ಕುಶ್ವಾಹ (24) ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.
ಮಧ್ಯಪ್ರದೇಶ ಧರ್ಮಸ್ವಾತಂತ್ರ್ಯ ಕಾಯ್ದೆಯ ಸೆಕ್ಷನ್ 3 ಹಾಗೂ ನಾಲ್ಕರ ಅನ್ವಯ ಹಾಗೂ ಭಾರತೀಯ ದಂಡಸಂಹಿತೆ ಸೆಕ್ಷನ್ 295 *ಎ) ಅನ್ವಯ ಹಾಗೂ ಬಾಲ್ಯವಿವಾಹ ಕಾಯ್ದೆ ತಡೆ ಕಾಯ್ದೆಯ ಸೆಕ್ಷನ್ 14ರ ಅನ್ವಯ ಪ್ರಕರಣ ದಾಖಲಿಸಲಾಗಿದೆ.





