1976ರಲ್ಲಿ ರಾಜ್ಯಸಭೆಯಿಂದ ಉಚ್ಚಾಟನೆಯಾದ ಸ್ವಾಮಿ ಈಗ ಮತ್ತೆ ರಾಜ್ಯಸಭಾ ಸದಸ್ಯ
ಹೊಸದಿಲ್ಲಿ, ಎ.28: ಸಂಸತ್ತಿನಿಂದ ಉಚ್ಚಾಟನೆಯಾದ 15ನೆ ಸದಸ್ಯರಾಗಿ ವಿಜಯ ಮಲ್ಯ ದಾಖಲೆಗೆ ಸೇರ್ಪಡೆಯಾದರು. 1951ರಲ್ಲಿ ಲೋಕಸಭೆ ಹಾಗೂ ರಾಜ್ಯಸಬೆ ಅಸ್ತಿತ್ವಕ್ಕೆ ಬಂದ ಬಳಿಕ ಡಾ.ಸುಬ್ರಮಣಿಯನ್ ಸ್ವಾಮಿ, ಮಾಜಿ ಪ್ರಧಾನಿ ಇಂದಿರಾಗಾಂಧಿ ಸೇರಿದಂತೆ 14 ಮಂದಿ ಇದುವರೆಗೆ ಉಚ್ಚಾಟನೆಯಾಗಿದ್ದರು. ವಿಚಿತ್ರವೆಂದರೆ ಹಿಂದೆ 1976ರಲ್ಲಿ ರಾಜ್ಯಸಭೆಯಿಂದ ಉಚ್ಚಾಟನೆಯಾಗಿದ್ದ ಸುಬ್ರಮಣಿಯನ್‌ಸ್ವಾಮಿ ಮಂಗಳವಾರ ಮತ್ತೆ ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಉಚ್ಚಾಟಿತ ಸದಸ್ಯರ ಪೈಕಿ ಲೋಕಸಭೆಯಿಂದ ಉಚ್ಚಾಟಿತರಾದ ಇಂದಿರಾಗಾಂಧಿ ಅವರ ಉಚ್ಚಾಟನೆ ನಿರ್ಧಾರವನ್ನು ಬಳಿಕ ಸದನ ತಳ್ಳಿಹಾಕಿತ್ತು. ಸದನದಲ್ಲಿ ಉತ್ತರ ನೀಡಲು ಮಾಹಿತಿ ಸಂಗ್ರಹಿಸುತ್ತಿದ್ದ ಕೆಲ ನಿರ್ದಿಷ್ಟ ಅಧಿಕಾರಿಗಳ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ವಿಚಾರಣೆಗೆ ಒಳಪಡಿಸಿದ ಕಾರಣಕ್ಕೆ, ಕರ್ತವ್ಯಕ್ಕೆ ಅಡ್ಡಿಪಡಿಸಿದ, ಬೆದರಿಕೆ ಹಾಕಿ ಕಿಕುರುಳ ನೀಡಿದ ಕಾರಣಕ್ಕಾಗಿ ಇಂದಿರಾಗಾಂಧಿಯವರನ್ನು ಉಚ್ಚಾಟಿಸಲಾಗಿತ್ತು.
ಸುಬ್ರಮಣಿಯನ್ ಸ್ವಾಮಿ ಅವರನ್ನು 1976ರಲ್ಲಿ, ಸದನದ ಘನತೆಗೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸಿದ ಕಾರಣಕ್ಕಾಗಿ ಉಚ್ಚಾಟಿಸಲಾಗಿತ್ತು. 1951ರಲ್ಲಿ ಲೋಕಸಭೆಯಿಂದ ಉಚ್ಚಾಟನೆಗೊಂಡ ಮೊದಲ ಸದಸ್ಯ ಎಂಬ ಕುಖ್ಯಾತಿಗೆ ಎಚ್.ಜಿ.ಮುದ್ಗಲ್ ಪಾತ್ರರಾಗಿದ್ದರು. ಲಂಚ ಸ್ವೀಕರಿಸಿದ ಆರೋಪದಲ್ಲಿ ಅವರನ್ನು ಉಚ್ಚಾಟಿಸಲಾಗಿತ್ತು. ಪ್ರಶ್ನೆ ಕೇಳಲು ಹಣ ಪಡೆದ ಆರೋಪದಲ್ಲಿ ಹನ್ನೊಂದು ಮಂದಿಯನ್ನು 2006ರಲ್ಲಿ ಉಚ್ಚಾಟಿಸಲಾಗಿತ್ತು. ಖಾಸಗಿ ಟಿವಿ ಚಾನಲ್ ನಡೆಸಿದ ರಹಸ್ಯ ಕಾರ್ಯಾಚರಣೆಯಿಂದ ಈ ಲಂಚ ಪ್ರಕರಣ ಬೆಳಕಿಗೆ ಬಂದಿತ್ತು.
ಕಾಂಗ್ರೆಸ್ ಸದಸ್ಯ ಕರಣ್ ಸಿಂಗ್ ನೇತೃತ್ವದ ನೀತಿಸಂಹಿತೆ ಸಮಿತಿಂು ಶಿಫಾರಸಿನ ಮೇರೆಗೆ ಇದೀಗ ಮಲ್ಯ ಅವರನ್ನು ಉಚ್ಚಾಟಿಸಲಾಗಿದೆ.





