ಮಂಗಳೂರು ನಗರವನ್ನೂ ಕಾಡುತ್ತಿದೆ ಬರದ ಭೀತಿ

ಮಂಗಳೂರು, ಎ.28: ರಾಜ್ಯಾದ್ಯಂತ ಕಾಡುತ್ತಿರುವ ಬರ ಸದ್ಯ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿಗೂ ಆವರಿಸುವ ಭೀತಿ ಕಾಡುತ್ತಿದೆ. ನಗರದ ಜನತೆಗೆ ಎರಡು ದಿನಗಳಿಗೊಮ್ಮೆ ನೀರು ಪೂರೈಸುತ್ತಿರುವ ಹೊರತಾಗಿಯೂ ತುಂಬೆ ಅಣೆಕಟ್ಟಿನಲ್ಲಿ ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಕುಸಿಯುತ್ತಿದೆ. ನಗರದಲ್ಲಿ ನೀರಿಗಾಗಿನ ಪರಿಸ್ಥಿತಿ ಬಿಗಡಾಯಿಸದಂತೆ ಕೊನೆಯ ಕ್ಷಣದಲ್ಲಿ ಎಚ್ಚರಗೊಂಡಿರುವ ಆಡಳಿತವು ಅಲ್ಲಲ್ಲಿ ಕೊಳವೆ ಬಾವಿಗಳ ನಿರ್ಮಾಣ, ಅನುಪಯುಕ್ತ ಬಾವಿನೀರನ್ನು ಶುದ್ಧೀಕರಿಸುವಂತಹ ಉಪಕ್ರಮಗಳಿಗೆ ಮುಂದಾಗುತ್ತಿದೆ.
ಆದರೂ, ಮಳೆ ಬಾರದಿದ್ದಲ್ಲಿ ನಗರದಲ್ಲಿ ಪರಿಸ್ಥಿತಿ ಬಿಗಡಾಯಿಸುವುದರಲ್ಲಿ ಎರಡು ಮಾತಿಲ್ಲ. ಆಡಳಿತವು ಉಪಕ್ರಮಗಳ ಜೊತೆಗೆ ಶಾಶ್ವತ ಕ್ರಮಗಳ ಬಗ್ಗೆ ಈಗಾಗಲೇ ಎಚ್ಚೆತ್ತುಕೊಂಡು ಮುಂದಾಗದಿದ್ದರೆ, ಮುಂದೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಪರಿಸ್ಥಿತಿ ದ.ಕ.ಜಿಲ್ಲೆಗೂ ಕಾಡುವ ಆತಂಕವನ್ನು ಈಗಾಗಲೇ ಪರಿಸರ ತಜ್ಞರು ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಆಲೋಚಿಸಬೇಕಾಗಿರುವುದು ಮಾತ್ರವಲ್ಲ, ನಮ್ಮಲ್ಲಿರುವ ಅವಕಾಶಗಳನ್ನು ಇನ್ನಾದರೂ ಸದ್ಬಳಕೆ ಮಾಡಬೇಕಾದ ಅನಿವಾರ್ಯ ಕಾಲಘಟ್ಟದಲ್ಲಿ ನಾವಿದ್ದೇವೆ. ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕಡಿಮೆ ಯಾಗುತ್ತಿರುವ ಜೊತೆಯಲ್ಲೇ ಕುಡಿಯುವ ನೀರಿನ ಮೂಲಗಳು ಬತ್ತಿ ಹೋಗುತ್ತಿರುವುದು ಜನರ ಆತಂಕಕ್ಕೆ ಕಾರಣವಾಗುತ್ತಿದೆ. ನಗರದಲ್ಲಿ ಶಂಭೂರಿನ ಎಎಂಆರ್ ಡ್ಯಾಂ ಹಾಗೂ ತುಂಬೆಯಲ್ಲಿನ ಕಿಂಡಿ ಅಣೆಕಟ್ಟಿನಿಂದಾಗಿ ನಗರ ಹಾಗೂ ಜಿಲ್ಲೆಯ ಕೆಲವು ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿದೆ.
ಅಲ್ಲದೆ, ಈ ಅಣೆಕಟ್ಟುಗಳ ನಿರ್ಮಾಣದಿಂದಾಗಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರಿನ ಒರತೆಯನ್ನು ಕಾಪಾಡಿಕೊಳ್ಳುವಲ್ಲಿ ಸಾಧ್ಯವಾಗಿದೆ. ಹಾಗಾಗಿ ಜಿಲ್ಲೆಯಲ್ಲಿರುವ ನದಿಗಳಿಗೆ ಇನ್ನಷ್ಟು ಚೆಕ್ ಡ್ಯಾಂಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಆಸಕ್ತಿ ವಹಿಸಿ, ಪಶ್ಚಿಮ ವಾಹಿನಿ ಯೋಜನೆಯನ್ನು ತುರ್ತಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಸರಕಾರ ಗಮನ ಹರಿಸಬಹುದಾಗಿದೆ. ಬೋರ್‌ವೆಲ್‌ಗಳನ್ನು ಕೊರೆಯುತ್ತಾ ಹೋದಂತೆ ನೀರಿನ ಒರತೆಗಳು ಬರಿದಾಗುವುದರಿಂದ ಬೋರ್‌ವೆಲ್‌ಗಳ ಬದಲು ಚೆಕ್‌ಡ್ಯಾಂಗಳು, ಹೂಳು ತುಂಬಿರುವ ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದಲ್ಲಿ ಮಾತ್ರವೇ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗಲಿದೆ. ಕೆರೆಗಳ ಮರು ಪೂರಣವಾಗಲಿ
ನಗರದಲ್ಲಿ ಈಗಾಗಲೇ ಸಾಕಷ್ಟು ಕೆರೆ, ಕೊಳಗಳು ಮಾಯವಾಗಿವೆ. ತುಂಬೆ ಅಣೆಕಟ್ಟಿನಿಂದ ನಗರಕ್ಕೆ ನೀರು ಸರಬರಾಜಾಗುವ ಮೊದಲು ಜನರಿಗೆ ನೀರಿನ ಮೂಲವಾಗಿದ್ದ ಬಹುತೇಕ ಕೆರೆಗಳ ಮೇಲೆ ಬೃಹತ್ ಕಟ್ಟಡಗಳು, ಮನೆಗಳು ನಿರ್ಮಾಣವಾಗಿವೆ. ಇದೀಗ ಅಳಿದುಳಿದಿರುವ ಕೆರೆಗಳು ಕೂಡಾ ಹೂಳು ತುಂಬಿ, ಒಳಚರಂಡಿಯ ಕೊಳಚೆ ನೀರು, ವಸ್ತುಗಳು ಸೇರಿ ಕಲುಷಿತವಾಗಿವೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಾವೂರು ಕೆರೆ ಒಂದು ಕಾಲದಲ್ಲಿ ಕಾವೂರು, ಮೇರಿಹಿಲ್, ಬೊಳ್ಪುಗುಡ್ಡೆ, ಕೊಂಚಾಡಿ ಮೊದಲಾದ ಪ್ರದೇಶಗಳ ನೀರಿನ ಪ್ರಮುಖ ತಾಣವಾಗಿತ್ತು. ಸುಮಾರು 25ರಿಂದ 30 ವರ್ಷಗಳ ಹಿಂದೆ ಬಟ್ಟೆ ಒಗೆಯುವುದು, ಸ್ನಾನ ಮಾಡುವುದು ಮಾತ್ರವಲ್ಲ, ಕುಡಿಯಲು ಕೂಡಾ ಇಲ್ಲಿನ ಕೆರೆಯ ನೀರನ್ನು ಉಪಯೋಗಿಸಲಾಗುತ್ತಿತ್ತು. ತುಂಬೆಯಿಂದ ನೀರು ಸರಬರಾಜಾಗಲು ಆರಂಭ ವಾದಂದಿನಿಂದ ಕೆರೆಯ ನೀರು ಸಾರ್ವಜನಿಕರಿಂದ ನೇರವಾಗಿ ಬಳಕೆಯಾಗುವುದು ಕಡಿಮೆಯಾದರೂ, ಸುತ್ತಮುತ್ತಲಿನ ತೋಟ, ಗದ್ದೆಗಳಿಗೆ ಇಲ್ಲಿಯ ನೀರನ್ನು ಹರಿಸಲಾಗುತ್ತಿತ್ತು. ಆದರೆ ಕೆಲ ವರ್ಷಗಳಿಂದೀಚೆಗೆ ನಗರ ಬೆಳೆದಂತೆ ಈ ಕೆರೆಯಲ್ಲಿ ಹೂಳು ತುಂಬುತ್ತಾ ಬಂದಿದ್ದು, ಅದರ ಬಗ್ಗೆ ಸಂಬಂಧಪಟ್ಟ ಮನಪಾ ಆಡಳಿತ, ಅಧಿಕಾರಿಗಳು ಗಮನ ಹರಿಸಿರಲಿಲ್ಲ. ಇದರಿಂದಾಗಿ ಮೇ ತಿಂಗಳಲ್ಲೂ ನೀರಿನಿಂದ ತುಂಬಿರುತ್ತಿದ್ದ ಕಾವೂರು ಕೆರೆ, ಎಪ್ರಿಲ್ ಆರಂಭದಲ್ಲೇ ಬತ್ತಿ ಹೋಗಿದೆ. ಕೆರೆಯ ಅಲ್ಲಲ್ಲಿ ನೀರಿನ ಒರತೆ ಕಾಣುತ್ತಿದೆಯಾದರೂ ಸದ್ಯ ಕೆರೆ ಜಾಗವನ್ನು ನೋಡಿದರೆ, ಇಲ್ಲೊಂದು ಕೆರೆಯಿತ್ತೇ ಎಂದು ಪ್ರಶ್ನಿಸುವಂತಾಗಿದೆ. ಇನ್ನು ನಗರದ ಪ್ರಮುಖ ಕೆರೆಯಾಗಿರುವ ಗುಜ್ಜರಕೆರೆಯ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಈ ಕೆರೆಯ ಹೂಳೆತ್ತುವ ನಿಟ್ಟಿನಲ್ಲಿ ಮನಪಾದಿಂದ ಈಗಾಗಲೇ ಲಕ್ಷಗಟ್ಟಲೆ ಹಣ ಸುರಿಯಲಾಗಿದ್ದರೂ ಕೆರೆ ಮತ್ತೆ ಹೂಳು ತುಂಬಿಕೊಂಡು ಬರಿದಾಗಿದೆ. ಕೆರೆಗೆ ಒಳಚರಂಡಿಯ ನೀರು ಸೇರುತ್ತಿರುವುದರಿಂದ ಸದ್ಯ ಇದನ್ನು ಉಪಯೋಗಿಸಲು ಸಾಧ್ಯವಿಲ್ಲವಾಗಿದೆ.
ಇದರಂತೆ ಎಮ್ಮೆಕೆರೆ, ಅರೆಕೆರೆ, ಒಂಬತ್ತುಕೆರೆ, ಜಲ್ಲಿಗುಡ್ಡೆ ಕೆರೆ, ಕಡೆಕಾರು ಕೆರೆ, ಓಕಿಕೆರೆ, ತಾವರೆಕೆರೆ ಮೊದಲಾದ ಕೆರೆಗಳ ಅಭಿವೃದ್ಧಿಯೊಂದಿಗೆ ಸುತ್ತಮುತ್ತಲಿನ ಅಂತರ್ಜಲ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಮಂಗಳೂರು ನಗರ ಬರಕ್ಕೆ ತುತ್ತಾಗುವ ಮೊದಲು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಜಲಸಂಪನ್ಮೂಲಗಳ ಸಂರಕ್ಷಣೆಗೆ ಮುಂದಾಗಬೇಕು.
ಎರಡು ವಾರದ ಹಿಂದೆಯವರೆಗೂ ಕೆರೆಯಲ್ಲಿದ್ದ ನೀರನ್ನು ಸಮೀಪದ ತೋಟಗಳಿಗೆ ಹರಿಸಲಾಗುತ್ತಿತ್ತು. ಇದೀಗ ಸಂಪೂರ್ಣ ಬತ್ತಿ ಹೋಗಿದೆ. ಹಿಂದೆಲ್ಲ ಈ ಕೆರೆಯ ನೀರನ್ನು ಸ್ಥಳೀಯರು ಉಪಯೋಗಿಸುತ್ತಿದ್ದರು. ಆದರೆ ಕೆಲ ವರ್ಷಗಳಿಂದೀಚೆಗೆ ಇಲ್ಲಿಗೆ ಕೊಳಚೆ ನೀರು ಕೂಡಾ ಸೇರಲು ಆರಂಭವಾಗಿದೆ. ಮನಪಾದಿಂದ ಕೆರೆಯ ಪಕ್ಕದಲ್ಲೇ 300 ಅಡಿ ಆಳದ ಕೊಳವೆಬಾವಿ ಕೊರೆಯಲಾಗಿದ್ದು, ಇಲ್ಲಿ ಸುತ್ತಮುತ್ತಲೂ ಸುಮಾರು 40 ಅಡಿ ಆಳದಲ್ಲೇ ನೀರು ಇದೆ. ಈ ಕೆರೆ ಇರುವುದರಿಂದಲೇ ಇಲ್ಲಿ ಬಾವಿ, ಕೊಳವೆ ಬಾವಿ ಕೊರೆದರೂ ನೀರು ಸಿಗುತ್ತದೆ. ಇಲ್ಲಿನ ಅಂತರ್ಜಲ ಮಟ್ಟ ಉತ್ತಮವಾಗಿದೆ. ಸುತ್ತಮುತ್ತಲಿನ ತೋಟಗಳು ಕೂಡಾ ಹಸುರಾಗಿವೆ. 15 ದಿನಗಳ ಹಿಂದೆಯಷ್ಟೇ ಇಲ್ಲಿ ಕೊಳವೆಬಾವಿ ನಿರ್ಮಿಸಲಾಗಿದ್ದು, ಕಾವೂರಿನ ಪಳನೀರಿಗೆ ಬೋರ್‌ವೆಲ್‌ನ ನೀರು ಪೂರೈಕೆ ಮಾಡಲಾಗುತ್ತಿದೆ.
-ಉಮೇಶ್, ಸ್ಥಳೀಯರು







