ರಾಘವೇಶ್ವರಶ್ರೀ ಅತ್ಯಾಚಾರ ಪ್ರಕರಣ: ಸಿಐಡಿಯ ಮೇಲ್ಮನವಿ ಪುರಸ್ಕರಿಸಿದ ಹೈಕೋರ್ಟ್

ಬೆಂಗಳೂರು, ಎ.28: ರಾಮಚಂದ್ರಾಪುರ ಮಠದ ರಾಘವೇಶ್ವರಶ್ರೀ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಐಡಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿದೆ. ಸೆಷನ್ಸ್ ಕೋರ್ಟ್ ಅತ್ಯಾಚಾರ ಪ್ರಕರಣದ ಆರೋಪದಿಂದ ರಾಘವೇಶ್ವರಶ್ರೀಯನ್ನು ಖುಲಾಸೆಗೊಳಿಸಿತ್ತು.
ಈ ಆದೇಶವನ್ನು ಪ್ರಶ್ನಿಸಿ ಸಿಐಡಿ ಅಧಿಕಾರಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಗುರುವಾರ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಅವರಿದ್ದ ನ್ಯಾಯಪೀಠ ಅರ್ಜಿಯನ್ನು ಪುರಸ್ಕರಿಸಿ ರಾಘವೇಶ್ವರ ಶ್ರೀಗೆ ನೋಟಿಸ್ ಜಾರಿಗೊಳಿಸಿ ಅರ್ಜಿ ವಿಚಾರಣೆಯನ್ನು ಬೇಸಿಗೆ ರಜೆಯಲ್ಲಿ ಕೈಗೆತ್ತಿಗೊಳ್ಳುವುದಾಗಿ ಆದೇಶಿಸಿತು.
ರಾಮಕಥಾ ಗಾಯಕಿ ಪ್ರೇಮಲತಾ ಶಾಸ್ತ್ರಿ ತನ್ನ ಮೇಲೆ ರಾಘವೇಶ್ವರಶ್ರೀ ಅತ್ಯಾಚಾರ ಎಸಗಿದ್ದಾರೆಂದು ಆಪಾದಿಸಿ ಸೆಷನ್ಸ್ ಕೋರ್ಟ್ ಮೆಟ್ಟಿಲೇರಿದ್ದರು.
ಸೆಷನ್ಸ್ ಕೋರ್ಟ್ ಪ್ರೇಮಲತಾಶಾಸ್ತ್ರಿ ಹಾಗೂ ಶ್ರೀಯ ನಡುವಿನ ಸಂಬಂಧ ಅವರು ಆರೋಪಿಸಿದಂತಲ್ಲವೆಂದು ಅಭಿಪ್ರಾಯಿಸಿ ಶ್ರೀಯ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸಿಐಡಿ ಹೈಕೋರ್ಟ್ ಮೆಟ್ಟಿಲೇರಿದೆ.





