ರಾಜ್ಯ ಸರಕಾರಿ ನೌಕರರ ವೇತನ ತಾರತಮ್ಯ: ನಿಯೋಗದಿಂದ ದಿಗ್ವಿಜಯ್ ಸಿಂಗ್‌ಗೆ ಮನವಿ

ಉಡುಪಿ, ಎ.28: ಕೇಂದ್ರ ಸರಕಾರಿ ನೌಕರರಿಗೆ ಸರಿಸಮಾನ ವೇತನ ಹಾಗೂ ಭತ್ತೆಗಳನ್ನು ರಾಜ್ಯ ಸರಕಾರಿ ನೌಕರರಿಗೂ ಅನುಷ್ಠಾನಗೊಳಿಸುವ ಬೇಡಿಕೆಯೊಂದಿಗೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘವು ಹೊಸದಿಲ್ಲಿಗೆ ತೆರಳಿ ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರಿಗೆ ಮನವಿ ಅರ್ಪಿಸಿದೆ. ರಾಷ್ಟ್ರದಲ್ಲೇ ಕರ್ನಾಟಕ ರಾಜ್ಯದ ಸರಕಾರಿ ನೌಕರರು ಅತ್ಯಂತ ಕಡಿಮೆ ವೇತನ ಹಾಗೂ ಭತ್ತೆಗಳನ್ನು ಪಡೆಯುತ್ತಿ ರುವುದು ದುರದೃಷ್ಟಕರ ಸಂಗತಿ. ಒಂದೇ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ಸರಕಾರಿ ನೌಕರರ ವೇತನ, ಭತ್ತೆಗಳಲ್ಲಿ ಸಮಾನತೆ ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ತತ್ವವನ್ನು ಅನುಸರಿಸಬೇಕೆಂದು ನೌಕರರ ಸಂಘದ ರಾಜ್ಯಾಧ್ಯಕ್ಷ ಬಿ.ಪಿ. ಮಂಜೇಗೌಡ ನೇತೃತ್ವದ ನಿಯೋಗವು ಮನವಿಯಲ್ಲಿ ಒತ್ತಾಯಿಸಿದೆ. ಈ ಬಗ್ಗೆ ಸರಕಾರದ ಮೇಲೆ ಒತ್ತಡ ಹೇರಲು ಜೂ.2ರಂದು ರಾಜ್ಯವ್ಯಾಪಿ ಲೇಖನಿ ಸ್ಥಗಿತ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂಬ ಮಾಹಿತಿಯನ್ನು ದಿಗ್ವಿಜಯ್ ಸಿಂಗ್ ಅವರಿಗೆ ನೀಡಲಾಯಿತು. ಇದಕ್ಕೆ ತಕ್ಷಣ ಸ್ಪಂದಿಸಿದ ದಿಗ್ವಿಜಯ್ ಸಿಂಗ್, ಮುಖ್ಯಮಂತ್ರಿಯನ್ನು ಸಂಪರ್ಕಿಸಿ ಕೂಡಲೇ ಸೂಕ್ತ ಪರಿಹಾರ ನೀಡುವುದಾಗಿ ಆಶ್ವಾಸನೆ ನೀಡಿದರು. ನಿಯೋಗದಲ್ಲಿ ಕೇಂದ್ರದ ಕಾಯದರ್ಶಿ ಪಟೇಲ್ ಪಾಂಡು ಕೋಶಾ ಧಿಕಾರಿ ಯೋಗಾನಂದ್, ಅಣ್ಣಿಗೇರಿ, ಉಡುಪಿ ಜಿಲ್ಲಾಧ್ಯಕ್ಷ ಸುಬ್ರಮಣ್ಯ ಶೇರಿಗಾರ್, ಕುಂದಾಪುರ ತಾಲೂಕು ಅಧ್ಯಕ್ಷ ಕೆ.ದಿನಕರ ಶೆಟ್ಟಿ ಅಂಪಾರ್ ಮುಂತಾದವರಿದ್ದರು.





