ಅಮೆರಿಕ ಸಂಸದರ ಕಳವಳ
ಪಾಕ್‌ಗೆ ಎಫ್-16 ವಿಮಾನಗಳ ಮಾರಾಟ
ವಾಶಿಂಗ್ಟನ್, ಎ. 28: ಪಾಕಿಸ್ತಾನಕ್ಕೆ ಎಂಟು ಎಫ್-16 ವಿಮಾನಗಳನ್ನು ಮಾರಾಟ ಮಾಡುವ ಒಬಾಮ ಆಡಳಿತದ ನಿರ್ಧಾರದ ಬಗ್ಗೆ ಅಮೆರಿಕದ ಉನ್ನತ ಸಂಸದರು ಕಳವಳ ವ್ಯಕ್ತಪಡಿಸಿದ್ದಾರೆ. ಈ ವಿಮಾನಗಳನ್ನು ಭಯೋತ್ಪಾದನೆಯ ವಿರುದ್ಧ ಬಳಸದೆ ಭಾರತದ ವಿರುದ್ಧ ಬಳಸುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ, ತನ್ನ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಅವರು ಒಬಾಮ ಆಡಳಿತವನ್ನು ಒತ್ತಾಯಿಸಿದ್ದಾರೆ.
‘‘ಈ ನಿರ್ಧಾರ ಹಾಗೂ ಯುದ್ಧ ವಿಮಾನಗಳನ್ನು ಮಾರಾಟ ಮಾಡುವ ಹೊತ್ತುಗಾರಿಕೆಯ ಬಗ್ಗೆ ನಾನು ಸೇರಿದಂತೆ ಕಾಂಗ್ರೆಸ್‌ನ ಹಲವು ಸದಸ್ಯರು ಆತಂಕ ವ್ಯಕ್ತಪಡಿಸಿದ್ದೇವೆ. ಇದರ ಪರಿಣಾಮವಾಗಿ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಉದ್ವಿಗ್ನತೆ ಹೆಚ್ಚಬಹುದು ಹಾಗೂ ಅಂತಿಮವಾಗಿ ಈ ವಿಮಾನಗಳನ್ನು ಪಾಕಿಸ್ತಾನ ಹೇಳಿಕೊಂಡಿರುವಂತೆ ಭಯೋತ್ಪಾದಕರ ವಿರುದ್ಧ ಬಳಸುವ ಬದಲು ಭಾರತ ಮತ್ತು ಇತರ ಪ್ರಾದೇಶಿಕ ಶಕ್ತಿಗಳ ವಿರುದ್ಧ ಅದು ಬಳಸಬಹುದಾಗಿದೆ’’ ಎಂದು ಬುಧವಾರ ನಡೆದ ಕಾಂಗ್ರೆಸ್ ವಿಚಾರಣೆಯಲ್ಲಿ ಸಂಸದ ಮ್ಯಾಟ್ ಸ್ಯಾಲ್ಮನ್ ಅಭಿಪ್ರಾಯಪಟ್ಟರು.
ವಿದೇಶ ವ್ಯವಹಾರಗಳ ಸಮಿತಿ ಸದನದ ಏಶ್ಯ ಮತ್ತು ಪೆಸಿಫಿಕ್ ಕುರಿತ ಉಪ ಸಮಿತಿ ಏರ್ಪಡಿಸಿದ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಗಳ ಕುರಿತ ಕಾಂಗ್ರೆಸ್ ವಿಚಾರಣೆಯ ವೇಳೆ ಸ್ಯಾಲ್ಮನ್ ವ್ಯಕ್ತಪಡಿಸಿದ ಅಭಿಪ್ರಾಯವನ್ನೇ ಇತರ ಹಲವು ಸಂಸದರು ವ್ಯಕ್ತಪಡಿಸಿದರು.
‘‘ಭಯೋತ್ಪಾದಕರ ವಿರುದ್ಧದ ಹೋರಾಟ ಕ್ಕಾಗಿಯೇ ವಿನ್ಯಾಸ ಗೊಳಿಸಲಾದ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ನಾವು ಪಾಕಿಸ್ತಾನಕ್ಕೆ ನೀಡಬೇಕೇ ಹೊರತು, ಭಾರತದೊಂದಿಗೆ ಯುದ್ಧಕ್ಕಾಗಿ ವಿನ್ಯಾಸಗೊಳಿಸಲಾದ ಶಸ್ತ್ರಾಸ್ತ್ರ ವ್ಯವಸ್ಥೆಯನ್ನಲ್ಲ’’ ಎಂದು ಈ ಸಂದರ್ಭದಲ್ಲಿ ವಿಚಾರಣೆಯಲ್ಲಿ ಭಾಗವಹಿಸಿದ ಕಾಂಗ್ರೆಸ್ ಸದಸ್ಯ ಬ್ರಾಡ್ ಶರ್ಮನ್ ಹೇಳಿದರು.
ಪಾಕಿಸ್ತಾನಕ್ಕೆ 70 ಕೋಟಿ ಡಾಲರ್ (ಸುಮಾರು 4,658 ಕೋಟಿ ರೂಪಾಯಿ) ವೆಚ್ಚದಲ್ಲಿ ಎಂಟು ಎಫ್-16 ಯುದ್ಧ ವಿಮಾನಗಳನ್ನು ಮಾರಾಟ ಮಾಡುವ ಒಬಾಮ ಆಡಳಿತದ ನಿರ್ಧಾರವನ್ನು ಪ್ರಸಕ್ತ ಅಮೆರಿಕದ ಸೆನೆಟ್ ತಡೆಹಿಡಿದಿದೆ.







