ಗುಜರಾತ್ ಡಿಜಿಪಿ ಪಾಂಡೆ ನೇಮಕದ ವಿರುದ್ಧ ಜೂಲಿಯೋ ರಿಬೇರೊ, ರಾಹುಲ್ ಶರ್ಮ ಹೈ ಕೋರ್ಟ್ ಗೆ
ಪಾಂಡೆ ದೇಶದ ಪ್ರಪ್ರಥಮ ಕೊಲೆ ಆರೋಪಿ ಡಿಜಿಪಿ !

ಅಹ್ಮದಾಬಾದ್ , ಎ. 29: ಇಷ್ರತ್ ಜಹಾನ್ ನಕಲಿ ಎನ್ ಕೌನ್ಟರ್ ಪ್ರಕರಣದ ಆರೋಪಿ ಪಿಪಿ ಪಾಂಡೆಯನ್ನು ಗುಜರಾತ್ ಪೋಲಿಸ್ ಮಹಾನಿರ್ದೆಶಕನಾಗಿ ನೇಮಕ ಮಾಡಿರುವ ವಿರುದ್ಧ ಗುಜರಾತ್ ನ ಮಾಜಿ ಐಪಿಎಸ್ ಅಧಿಕಾರಿ ರಾಹುಲ್ ಶರ್ಮ ಗುಜರಾತ್ ಹೈ ಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. 2002 ರಲ್ಲಿ ನಿಷ್ಪಕ್ಷಪಾತಿಯಾಗಿ ಕೆಲಸ ನಿರ್ವಹಿಸಿದ್ದಕ್ಕೆ ಮೋದಿ ನೇತೃತ್ವದ ಗುಜರಾತ್ ಸರಕಾರದ ಕೆಂಗಣ್ಣಿಗೆ ಗುರಿಯಾಗಿದ್ದ ರಾಹುಲ್ ಶರ್ಮ ಈ ಹಿಂದೆ ಗುಜರಾತ್ ನಲ್ಲಿ ಸೇವೆ ಸಲ್ಲಿಸಿದ್ದ ಮಾಜಿ ಸೂಪರ್ ಕಾಪ್ ಜೂಲಿಯೋ ರಿಬೇರೊ ಅವರ ಪರವಾಗಿ ಅರ್ಜಿ ಸಲ್ಲಿಸಿದ್ದಾರೆ. ದೇಶದಲ್ಲೇ ಪ್ರಪ್ರಥಮ ಕೊಲೆ ಆರೋಪಿ ಪೊಲೀಸ್ ಮಹಾ ನಿರ್ದೇಶಕ ಎಂಬ ಕುಖ್ಯಾತಿಗೆ ಒಳಗಾಗಿದ್ದಾರೆ ಪಿಪಿ ಪಾಂಡೆ. ಅವರು ಸದ್ಯ ಜಾಮೀನಿನ ಮೇಲೆ ಬಿದುಗಡೆಯಾದವರು.
ಇಷ್ರತ್ ಪ್ರಕರಣದಲ್ಲಿ ಪಾಂಡೆ ವಿರುದ್ಧ ಸಾಕ್ಷಿಗಳಾಗಿರುವ ಪೋಲಿಸರು ಈಗ ಪಾಂಡೆ ಕೈಕೆಳಗೆ ಕೆಲಸ ಮಾಡಬೇಕಾಗುತ್ತದೆ ಎಂಬುವುದು ರಾಹುಲ್ ಶರ್ಮ ಅವರ ವಾದ. ಮಾನವ ಹಕ್ಕು ಸಂಘಟನೆ ಪಿಯುಸಿಎಲ್ ನ ಗುಜರಾತ್ ಘಟಕವೂ ಈ ಅರ್ಜಿಗೆ ಸಹ ಅರ್ಜಿದಾರನಾಗುವ ಸಾಧ್ಯತೆ ಇದೆ.
ಐಪಿಎಸ್ ನಿಂದ ಸ್ವಯಂ ನಿವೃತ್ತಿ ಪಡೆದ ರಾಹುಲ್ ಶರ್ಮ ಈಗ ಗುಜರಾತ್ ಹೈ ಕೋರ್ಟ್ ನ ನ್ಯಾಯವಾದಿಯಾಗಿದ್ದಾರೆ.
2002 ರಲ್ಲಿ ಭಾವನಗರದ ಪೊಲೀಸ್ ವರಿಷ್ಟಾಧಿಕಾರಿಯಾಗಿದ್ದ ಶರ್ಮ ಸುಮಾರು ಇನ್ನೂರು ಮಕ್ಕಳಿದ್ದ ಮದ್ರಸವೊಂದರ ಮೇಲೆ ದಾಳಿ ಮಾಡಲು ಸಜ್ಜಾಗಿದ್ದ ಹಿಂದುತ್ವ ಕಾರ್ಯಕರ್ತರ ಮೇಲೆ ಗೋಲಿಬಾರ್ ಗೆ ಆದೇಶಿಸಿ ಮೋದಿ ಸರಕಾರದ ಕೆಂಗಣ್ಣಿಗೆ ಗುರಿಯಾಗಿದ್ದರು. ಆಗಿನ ರಾಜ್ಯ ಗೃಹ ಸಚಿವ ಗೋವರ್ಧನ ಜಡ್ಹಾಫಿಯ ಅವರು " ನಿಮ್ಮ ಗೋಲಿಬಾರ್ ಗೆ ಬಲಿಯಾದವರ ಅನುಪಾತ ಸರಿಯಾಗಿಲ್ಲ ( ಅಂದರೆ ಮುಸ್ಲಿಮರಿಗಿಂತ ಹಿಂದೂಗಳೇ ಹೆಚ್ಚು ಮೃತಪಟ್ಟಿದ್ದಾರೆ ) " ಎಂದು ಅವರ ಮೇಲೆ ಕ್ರಮ ಕೈಗೊಂಡಿದ್ದರು.
Courtesy : Catch News







