ದುಡಿಯುವ ಯಜಮಾನನ ನಿಧನದಿಂದ ದಿಕ್ಕೆಟ್ಟ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ವಿಶಿಷ್ಟ ಯೋಜನೆ
ಮೇ 2 ರಂದು ದಕ್ಷಿಣ ಕನ್ನಡ ಮುಸ್ಲಿಂ ಅಸೋಸಿಯೇಷನ್ (ಡಿಕೆಎಂಎ) ಉದ್ಘಾಟನೆ

ಮಂಗಳೂರು, ಎ.29: ದ.ಕ. ಜಿಲ್ಲೆಯ ಮುಸ್ಲಿಮ್ ಮೊಹಲ್ಲಾಗಳಲ್ಲಿ ಹೆಚ್ಚಿನ ಜಮಾಅತರು ಬಡ ಮತ್ತು ಮಧ್ಯಮ ವರ್ಗಕ್ಕೆ ಸೇರಿದವರಾಗಿದ್ದು, ಈ ಕುಟುಂಬಗಳು ಯಜಮಾನ ಅಥವಾ ದುಡಿಯುವ ವ್ಯಕ್ತಿಗಳನ್ನು ಕಳೆದುಕೊಂಡಾಗ ತೀವ್ರ ಸಂಕಷ್ಟಕ್ಕೊಳಗಾಗುತ್ತವೆ. ಈ ರೀತಿ ಸಂಕಷ್ಟಕ್ಕೊಳಗಾಗಿ ಜೀವನ ನಿರ್ವಹಣೆಗೆ ಹೆಣಗಾಡುವ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ದಕ್ಷಿಣ ಕನ್ನಡ ಮುಸ್ಲಿಮ್ ಅಸೋಸಿಯೇಶನ್(ಡಿಕೆಎಂಎ) ಅಸ್ತಿತ್ವಕ್ಕೆ ಬಂದಿದೆ.
ಇದರ ಉದ್ಘಾಟನಾ ಕಾರ್ಯಕ್ರಮವು ಮೇ 2ರಂದು 10 ಗಂಟೆಗೆ ನಗರದ ಪುರಭವನದಲ್ಲಿ ನಡೆಯಲಿದೆ. ಡಿಕೆಎಂಎ ಮೂಲಕ ಸಂಕಷ್ಟದಲ್ಲಿರುವ ಬಡ ಮತ್ತು ಮಧ್ಯಮ ವರ್ಗದ ಜನರ ನೆರವಿಗೆ ಮಹತ್ತರ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಅದರಂತೆ ಫಲಾನುಭವಿ ಸದಸ್ಯರು ಮರಣ ಹೊಂದಿದ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಸೂಕ್ತ ಸಹಾಯಧನವನ್ನು ವಿತರಿಸಲಾಗುತ್ತದೆ. ಡಿಕೆಎಂಎ ಅನ್ನು ಮೇ 2ರಂದು ದ.ಕ. ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್ ಉದ್ಘಾಟಿಸುವರು. ಉಡುಪಿ ಜಿಲ್ಲಾ ಖಾಝಿ ಅಲ್ಹಾಜ್ ಪಿ.ಎಂ.ಇಬ್ರಾಹೀಂ ಮುಸ್ಲಿಯಾರ್ ಬೇಕಲ ದುಆ ನೆರವೇರಿಸುವರು. ಅನೇಕ ಮುಸ್ಲಿಮ್ ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ನೇತಾರರು, ಉದ್ಯಮಿಗಳು, ದಾನಿಗಳು, ಸಂಘಸಂಸ್ಥೆಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮಹತ್ತರ ಉದ್ದೇಶವನ್ನಿಟ್ಟುಕೊಂಡು ಸ್ಥಾಪಿತಗೊಂಡ ಡಿಕೆಎಂಎ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ಮಸೀದಿಗಳ ಪದಾಧಿಕಾರಿಗಳು ಮತ್ತು ಖತೀಬರು, ಧಾರ್ಮಿಕ, ಸಾಮಾಜಿಕ, ರಾಜಕೀಯ ನಾಯಕರು, ಉದ್ಯಮಿಗಳು, ದಾನಿಗಳು, ಮುಸ್ಲಿಮ್ ಸಂಘಸಂಸ್ಥೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಡಿಕೆಎಂಎ ಸ್ಥಾಪಕಾಧ್ಯಕ್ಷ ಹಾಜಿ ಎಸ್.ಎಂ.ರಶೀದ್ ಪ್ರಕಟನೆಯಲ್ಲಿ ಕೋರಿದ್ದಾರೆ.





