ಮೇ 1ರಂದು ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಸಂಸದರ ವಿರೋಧ

ಹೊಸದಿಲ್ಲಿ,ಎ.29: ಎಂಬಿಬಿಎಸ್ ಮತ್ತು ಬಿಡಿಎಸ್ ಕೋರ್ಸ್‌ಗಳಿಗೆ ಮೊದಲ ಹಂತದ ಪ್ರವೇಶ ಪರೀಕ್ಷೆಯನ್ನು ಮೇ 1ರಂದು ನಡೆಸುವುದನ್ನು ಶುಕ್ರವಾರ ಲೋಕಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಸದಸ್ಯರು ವಿರೋಧಿಸಿದರು. ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಕಾಲಾವಕಾಶ ದೊರೆಯುವುದಿಲ್ಲ ಎಂದು ಅವರು ಬೆಟ್ಟು ಮಾಡಿದರು. ಹೊಸ ಪದ್ಧತಿಯನ್ನು ಅಳವಡಿಸಿಕೊಳ್ಳಲು ರಾಜ್ಯಗಳಿಗೆ 2018ರವರೆಗೆ ಕಾಲಾವಕಾಶ ನೀಡಬೇಕೆಂದು ಕೆಲವು ಸದಸ್ಯರು ಆಗ್ರಹಿಸಿದರು.
ಮೇ 1 ಮತ್ತು ಜು.24ರಂದು ಎರಡು ಹಂತಗಳಲ್ಲಿ ವೈದ್ಯಕೀಯ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಡೆಸುವ ಕೇಂದ್ರದ ಯೋಜನೆಯನ್ನು ಸರ್ವೋಚ್ಚ ನ್ಯಾಯಾಲಯವು ಗುರುವಾರ ಒಪ್ಪಿಕೊಂಡಿತ್ತು. ಶೂನ್ಯವೇಳೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿದ ಬಿಜೆಪಿಯ ಜಗದಾಂಬಿಕಾ ಪಾಲ್ ಅವರು, ಎಲ್ಲ ವಿದ್ಯಾರ್ಥಿಗಳಿಗೂ ಸಮಾನ ಸಮಯಾವಕಾಶವನ್ನು ನೀಡಲು ಜು.24ರಂದು ಏಕ-ಹಂತ ಪರೀಕ್ಷೆಯನ್ನು ನಡೆಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್‌ನ ರಾಜೀವ ಸತವ್ ಅವರು, ಆದರೆ ಸರಕಾರವು ಮಹಾರಾಷ್ಟ್ರದಂತಹ ರಾಜ್ಯಗಳಿಗೆ 2018ರವರೆಗೆ ಕಾಲಾವಕಾಶ ಪಡೆದುಕೊಳ್ಳಲು ಮೊದಲು ಸರ್ವೋಚ್ಚ ನ್ಯಾಯಾಲಯವನ್ನು ಸಂಪರ್ಕಿಸಬೇಕು ಎಂದು ಹೇಳಿದರು.
ನೀಟ್ ಪರೀಕ್ಷೆಗೆ ಎರಡು ದಿನಾಂಕಗಳನ್ನು ನಿಗದಿಗೊಳಿಸಲಾಗಿದ್ದು,ಇದು ಎರಡನೇ ಹಂತದಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ. ಆದರೆ ಮೇ 1ರಂದು ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು ಒತ್ತಡಕ್ಕೆ ಸಿಲುಕುತ್ತಾರೆ ಎಂದು ಪಾಲ್ ಹೇಳಿದರು.





