ಎನ್.ಕೆ.ಸಿಂಗ್‌ಗೆ ಜಪಾನಿನ ಪ್ರತಿಷ್ಠಿತ ಪ್ರಶಸ್ತಿ

ಹೊಸದಿಲ್ಲಿ,ಎ.29: ಮಾಜಿ ಅಧಿಕಾರಿ-ಹಾಲಿ ರಾಜಕಾರಣಿ ಎನ್.ಕೆ.ಸಿಂಗ್ ಅವರು ಕಳೆದ ಎರಡು ದಶಕಗಳಲ್ಲಿ ಭಾರತ-ಜಪಾನ್ ನಡುವಿನ ಆರ್ಥಿಕ ಸಂಬಂಧಗಳ ಬೆಳವಣಿಗೆಯಲ್ಲಿ ಸಲ್ಲಿಸಿರುವ ಕೊಡುಗೆಗಾಗಿ ಅವರಿಗೆ ಜಪಾನಿನ ಎರಡನೇ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯು ಒಲಿದು ಬಂದಿದೆ.
‘ದಿ ಆರ್ಡರ್ ಆಫ್ ದಿ ರೈಸಿಂಗ್ ಸನ್,ಗೋಲ್ಡ್ ಆ್ಯಂಡ್ ಸಿಲ್ವರ್ ಸ್ಟಾರ್’ಪ್ರಶಸ್ತಿಯನ್ನು ಮೇ 10ರಂದು ಟೋಕಿಯೋದ ಇಂಪೀರಿಯಲ್ ಪ್ಯಾಲೇಸ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಧಾನಿ ಶಿಂಜೊ ಅಬೆ ಅವರು ಸಿಂಗ್ ಅವರಿಗೆ ಪ್ರದಾನಿಸಲಿದ್ದಾರೆ. ಪ್ರಶಸ್ತಿ ಪ್ರದಾನದ ಬಳಿಕ ಸಿಂಗ್ ಚಕ್ರವರ್ತಿ ಅಕಿಹಿಟೊ ಅವರನ್ನು ಭೇಟಿಯಾಗಲಿದ್ದಾರೆ.
ರಾಜಕಾರಣಿ,ಆರ್ಥಿಕ ತಜ್ಞ ಮತ್ತು ಮಾಜಿ ಉನ್ನತ ಅಧಿಕಾರಿಯಾಗಿರುವ ಸಿಂಗ್ ಇತ್ತೀಚಿನವರೆಗೂ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಾರುತಿ-ಸುಝುಕಿ ಹೂಡಿಕೆ ನಿರ್ಧಾರ ಮತ್ತು ಆ ಬಳಿಕ ಭಾರತಕ್ಕೆ ಜಪಾನಿ ವಾಹನ ತಯಾರಿಕೆ ಕಂಪನಿಗಳ ಪ್ರವೇಶದಲ್ಲಿ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು. ವೆಚ್ಚ ಮತ್ತು ಆದಾಯ ಕಾರ್ಯದರ್ಶಿಯಾಗಿ,ಯೋಜನಾ ಆಯೋಗದ ಸದಸ್ಯರಾಗಿಯೂ ಅವರು ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.





