ರಕ್ಷಣಾ ಕ್ಷೇತ್ರದಲ್ಲಿ ಶೇ.100 ಸ್ವಾವಲಂಬನೆ ಅಸಾಧ್ಯ: ಪಾರ್ರಿಕರ್

ಹೊಸದಿಲ್ಲಿ,ಎ.29: ಹಣವನ್ನು ಉಳಿಸಲು ಸೀಮಿತ ಸಂಖ್ಯೆಯಲ್ಲಿ ಕೆಲವು ಬಿಡಿಭಾಗಗಳನ್ನು ಮುಕ್ತ ಮಾರುಕಟ್ಟೆಯಿಂದ ಖರೀದಿಸುವುದು ಅಗತ್ಯವಾಗಿರುವುದರಿಂದ ರಕ್ಷಣಾ ಕ್ಷೇತ್ರದಲ್ಲಿ ಶೇ.100 ಸ್ವಾವಲಂಬನೆಯನ್ನು ಸಾಧಿಸುವುದು ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವ ಮನೋಹರ ಪಾರ್ರಿಕರ್ ಅವರು ಶುಕ್ರವಾರ ಲೋಕಸಭೆಯಲ್ಲಿ ತಿಳಿಸಿದರು.
ಕೆಲವು ಬಿಡಿಭಾಗಗನ್ನು ಸಣ್ಣ ಸಂಖ್ಯೆಯಲ್ಲಿ ಉತ್ಪಾದಿಸಿದರೆ ಭಾರೀ ವೆಚ್ಚವಾಗುತ್ತದೆ,ಆದ್ದರಿಂದ ಅವುಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸುವುದು ಒಳ್ಳೆಯದು ಎಂದು ಅವರು ಹೇಳಿದರು. ರಕ್ಷಣಾ ಉತ್ಪಾದನೆಯಲ್ಲಿ ಭಾರತವೆಂದು ಶೇ.100 ಸ್ವಾವಲಂಬನೆಯನ್ನು ಸಾಧಿಸುತ್ತದೆ ಎಂಬ ಪೂರಕ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.
ಶೇ.70ರಷ್ಟು ಸ್ವಾವಲಂಬನೆಯನ್ನು ಉನ್ನತ ಮಟ್ಟದ್ದೆಂದು ಪರಿಗಣಿಸಬಹುದು ಎಂದು ಅವರು ಹೇಳಿದರಾದರೂ, ಭಾರತವು ಅದನ್ನು ಸಾಧಿಸಿದೆಯೇ ಎನ್ನುವುದನ್ನು ನಿರ್ದಿಷ್ಟವಾಗಿ ಹೇಳಲಿಲ್ಲ.
‘ಮೇಕ್ ಇನ್ ಇಂಡಿಯಾ’ಅಭಿಯಾನವನ್ನು ಪ್ರಸ್ತಾಪಿಸಿದ ಅವರು,‘ಮೇಕ್ ವನ್’ ಕಾರ್ಯಕ್ರಮದಡಿ ಸರಕಾರವು ಯೋಜನಾ ವೆಚ್ಚದ ಶೇ.90ರಷ್ಟು ಆರ್ಥಿಕ ನೆರವನ್ನು ಒದಗಿಸುತ್ತದೆ ಮತ್ತು ಉತ್ಪಾದಕರು ಎರಡು ವರ್ಷಗಳಲ್ಲಿ ಸಶಸ್ತ್ರ ಪಡೆಗಳ ನಿರೀಕ್ಷೆಗೆ ತಕ್ಕಂತೆ ಉತ್ಪನ್ನವನ್ನು ಅಭಿವೃದ್ಧಿಗೊಳಿಸಬೇಕು. ಈ ಷರತ್ತು ಪೂರೈಸಿದರೆ ಸರಕಾರವು ಆ ಉತ್ಪನ್ನವನ್ನು ಖರೀದಿಸುತ್ತದೆ. ಅದೇ ರೀತಿ ‘ಮೇಕ್ ಟು’ ಕಾರ್ಯಕ್ರಮದಡಿ ಉತ್ಪನ್ನ ತಯಾರಿಕೆಗೆ ಉದ್ಯಮವೇ ಹಣವನ್ನು ತೊಡಗಿಸಬೇಕು ಮತ್ತು ಅದು ತೃಪ್ತಿಕರವಾಗಿದ್ದರೆ ಸಶಸ್ತ್ರ ಪಡೆಗಳು ಅದನ್ನು ಖರೀದಿಸುತ್ತವೆ ಎಂದು ವಿವರಿಸಿದರು.
ಅಮೆರಿಕ,ರಷ್ಯಾ,ಇಸ್ರೇಲ್ ಮತ್ತು ಫ್ರಾನ್ಸ್‌ನಂತಹ ರಾಷ್ಟ್ರಗಳಿಂದ ರಕ್ಷಣಾ ಖರೀದಿ ವೆಚ್ಚವು 2013-14ರಲ್ಲಿ 35,082.10 ಕೋ.ರೂ.ಇದ್ದುದು 2014-15ರಲ್ಲಿ 24,992.36 ಕೋ.ರೂ.ಗೆ ಮತ್ತು 2015-16ರಲ್ಲಿ 22,422.12 ಕೋ.ರೂ.ಗೆ ಇಳಿದಿದೆ ಎಂದು ಅವರು ಸಚಿವರು ತನ್ನ ಲಿಖಿತ ಉತ್ತರದಲ್ಲಿ ತಿಳಿಸಿದರು.







