ದೇಶದ ಜಲಾಶಯಗಳಲ್ಲಿನ ನೀರಿನ ಮಟ್ಟ ಒಟ್ಟೂ ಸಾಮರ್ಥ್ಯದ ಶೇ.21ಕ್ಕೆ ಕುಸಿತ

ಹೊಸದಿಲ್ಲಿ,ಎ.29: ದಿನೇದಿನೇ ತಾಪಮಾನ ಏರಿಕೆಯೊಂದಿಗೆ ದೇಶಾದ್ಯಂತದ 91 ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟವು ಅವುಗಳ ಒಟ್ಟೂ ಸಾಮರ್ಥ್ಯದ ಶೇ.21ಕ್ಕೆ ಕುಸಿದಿದೆ ಎಂದು ಕೇಂದ್ರ ಜಲ ಸಂಪನ್ಮೂಲ ಸಚಿವಾಲಯವು ಶುಕ್ರವಾರ ತಿಳಿಸಿದೆ.
ಎ.28ಕ್ಕೆ ಕೊನೆಗೊಂಡ ವಾರದಲ್ಲಿ ಒಟ್ಟೂ 157.799 ಶತಕೋಟಿ ಘನ ಮೀಟರ್(ಬಿಸಿಎಂ) ಸಂಗ್ರಹದ ಸಾಮರ್ಥ್ಯ ಹೊಂದಿರುವ ಈ ಜಲಾಶಯಗಳಲ್ಲಿ 32.3925 ಬಿಸಿಎಂ ನೀರು ಲಭ್ಯವಿತ್ತು ಎಂದು ಸಚಿವಾಲಯವು ತಿಳಿಸಿದೆ. ಇದು ಕಳೆದ ವರ್ಷದ ಇದೇ ಅವಧಿಯಲ್ಲಿ ಲಭ್ಯವಿದ್ದ ನೀರಿನ ಪ್ರಮಾಣಕ್ಕಿಂತ ಶೇ.36ರಷ್ಟು ಮತ್ತು ಇದೇ ಅವಧಿಗೆ 10 ವರ್ಷಗಳ ಸರಾಸರಿ ದಾಸ್ತಾನು ಮಟ್ಟಕ್ಕಿಂತ ಶೇ.23ರಷ್ಟು ಕಡಿಮೆಯಾಗಿದೆ.
ಕರ್ನಾಟಕ, ಹಿಮಾಚಲ ಪ್ರದೇಶ, ತೆಲಂಗಾಣ, ಪಂಜಾಬ್, ಒಡಿಶಾ, ಪ.ಬಂಗಾಲ, ರಾಜಸ್ಥಾನ, ಜಾರ್ಖಂಡ್, ಗುಜರಾತ್, ಮಹಾರಾಷ್ಟ್ರ, ಉ.ಪ್ರದೇಶ,ಉತ್ತರಾಖಂಡ, ಮಧ್ಯಪ್ರದೇಶ, ಛತ್ತೀಸ್‌ಗಡ, ತಮಿಳುನಾಡು ಮತ್ತು ಕೇರಳ ರಾಜ್ಯಗಳು ಕಳೆದ ವರ್ಷಕ್ಕೆ ಹೋಲಿಸಿದರೆ ತಮ್ಮಲ್ಲಿಯ ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆಯಿದೆ ಎಂದು ವರದಿ ಮಾಡಿವೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನೀರಿನ ಲಭ್ಯತೆ ಪ್ರಮಾಣ ಉತ್ತಮವಾಗಿದೆಯೆಂದು ಆಂಧ್ರಪ್ರದೇಶ ಮತ್ತು ತ್ರಿಪುರಾ ರಾಜ್ಯಗಳು ಮಾತ್ರ ವರದಿ ಸಲ್ಲಿಸಿವೆ.







