ಬೋರ್‌ವೆಲ್ ಕೊರೆಯಲು ಸ್ಥಳೀಯರ ಆಕ್ಷೇಪ
ಪೊಲೀಸ್ ಭದ್ರತೆಯಲ್ಲಿ ಕಾಮಗಾರಿ
ಕಾರವಾರ, ಎ.29: ತಾಲೂಕಿನ ಕಡವಾಡದ ಗುನಗಿವಾಡಾ ಜನತಾ ವಿದ್ಯಾಲಯದ ಸಮೀಪ ಬರಗಾಲದ ನಿಮಿತ್ತ ತಹಶೀಲ್ದಾರ್ ಅಧಿಕಾರಿಗಳ ತಂಡ ಬೋರ್‌ವೆಲ್ ಕೊರೆಯಲು ಮುಂದಾದಾಗ, ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿ ತಡೆಯೊಡ್ಡಿದ ಕಾರಣ ಪೊಲೀಸ್ ಭದ್ರತೆಯಲ್ಲಿ ಬೋರ್‌ವೆಲ್ ಕೊರೆಸಿದ ಘಟನೆ ನಡೆದಿದೆ.
ಕಡವಾಡ ಸುತ್ತಮುತ್ತಲಿನ ಗ್ರಾಮಗಳಿಗೆ ನೀರು ಸರಬರಾಜು ಮಾಡುವ ಉದ್ದೇಶದಿಂದ ಬೋರ್‌ವೆಲ್ ತೆರೆಯಲು ತಹಶೀಲ್ದಾರ್ ಜಿ.ಎನ್.ನಾಯ್ಕ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿ ಬೋರ್‌ವೆಲ್ ಕೊರೆಸಲು ಮುಂದಾಗಿದ್ದರು. ಆದರೆ ಬೋರ್‌ವೆಲ್ ಕೊರೆಯಲು ಆಯ್ಕೆ ಮಾಡಿದ ಜಾಗವು ಖಾಸಗಿಯವರಿಗೆ ಸೇರಿದ್ದು, ಬಾವಿಗಳಲ್ಲಿ ನೀರಿನ ಕೊರತೆ ಆಗಬಹುದು ಎಂಬ ಕಾರಣದಿಂದ ಗೊಂದಲ ಉಂಟಾಗಿದೆ. ಸ್ಥಳೀಯ ಜನರಿಗೆ ನೀರು ಸರಬರಾಜು ಮಾಡುವುದಾದರೆ ಅಭ್ಯಂತರವಿಲ್ಲ. ಆದರೆ ಇಲ್ಲಿಂದ ಬೇರೆ ಕಡೆಗೆ ನೀರು ಸರಬರಾಜು ಮಾಡಿದರೆ, ಗ್ರಾಮದ ಎಲ್ಲ ಬಾವಿಗಳು ಬತ್ತಿ ಹೋಗಲಿವೆ. ಆದ್ದರಿಂದ ಇಲ್ಲಿ ಬೋರ್‌ವೆಲ್ ಬೇಡ. ಅಲ್ಲದೇ ಇದೇ ಪ್ರದೇಶದಲ್ಲಿ ಸರಕಾರದ ಹಣದಿಂದ ಸಾರ್ವಜನಿಕ ಬಾವಿಗಳನ್ನು ಖಾಸಗಿಯವರ ಕಾಂಪೌಂಡ್‌ನಲ್ಲಿ ನಿರ್ಮಿಸಲಾಗಿದೆ. ಆದರೆ ಖಾಸಗಿಯವರು ಸಾರ್ವಜನಿಕರಿಗೆ ನೀರು ಒಯ್ಯಲು ಬಿಡುತ್ತಿಲ್ಲ. ಮೊದಲು ಅವುಗಳಿಗೆ ಪಂಪ್‌ಸೆಟ್ ಅಳವಡಿಸಿ ಅಲ್ಲಿಂದ ನೀರು ಸರಬರಾಜು ಮಾಡಿ. ಇಲ್ಲಿ ಬೋರ್‌ವೆಲ್ ಕೊರೆಯುವುದು ಬೇಡ ಎಂದು ಇಲ್ಲಿನ ಸ್ಥಳೀಯರು ಆಕ್ಷೇಪ ವ್ಯಕ್ತ ಪಡಿಸಿದರು.
ಜನರು ವಿರೋಧ ವ್ಯಕ್ತ ಪಡಿಸುತ್ತಿರುವುದನ್ನು ಕಂಡ ತಹಶೀಲ್ದಾರರು ಪೊಲೀಸ್‌ನವರನ್ನು ಕರೆಸಿದಾಗ ವಿರೋಧಿಸಿದ ಸಾರ್ವಜನಿಕರನ್ನು ವಶಕ್ಕೆ ಪಡೆದುಕೊಂಡು ಗ್ರಾಮೀಣ ಪೊಲೀಸ್ ಠಾಣೆಗೆ ತರಲಾಯಿತು. ನಂತರ ಪೊಲೀಸ್ ಭದ್ರತೆಯಲ್ಲಿ ಬೋರ್‌ವೆಲ್ ಕೊರೆಯುವ ಕಾಮಗಾರಿ ಮುಂದುವರಿಯಿತು. ಕಾಮಗಾರಿ ಮುಗಿದ ನಂತರ ವಶಕ್ಕೆ ಪಡೆದವರನ್ನು ಬಿಡುಗಡೆ ಮಾಡಲಾಯಿತು.
ಸಾರ್ವಜನಿಕರ ಮಾತು: ಹತ್ತು ವರ್ಷದ ಹಿಂದೆ ಇಲ್ಲಿ ಬೋರ್‌ವೆಲ್ ಕೊರೆದು ಟ್ಯಾಂಕ್‌ನಲ್ಲಿ ನೀರು ಸಂಗ್ರಹಿಸಿ, ಪೈಪ್ ಲೈನ್ ಮೂಲಕ ಮನೆ ಮನೆಗೂ ನೀರು ಸರಬರಾಜು ಮಾಡಲಾಗುವುದು ಎಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ಭರವಸೆ ನೀಡಲಾಗಿತ್ತು.
ಆದರೆ ಬೋರ್‌ವೆಲ್ ಕೊರೆದು ಟ್ಯಾಂಕ್ ಕಟ್ಟಿದರೂ ಪೈಪ್‌ಲೈನ್ ಮೂಲಕ ನೀರು ಸರಬರಾಜು ಮಾಡುವ ಭರವಸೆ ಇನ್ನು ಪೂರೈಸಿಲ್ಲ. ಗುನಗಿವಾಡಾ ಎತ್ತರದ ಗುಡ್ಡದ ಮೇಲಿರುವುದರಿಂದ ನೀರಿನ ಟ್ಯಾಂಕರ್‌ಗಳು ಗುಡ್ಡ ಹತ್ತಿ ಮೇಲೆ ಬರುವುದಿಲ್ಲ. ಹೀಗಾಗಿ ನಮ್ಮ ಗ್ರಾಮದ ಜನರು ತೀವ್ರ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ ಎಂದು ಸಾರ್ವಜನಿಕರು ಸ್ಥಳದಲ್ಲಿದ್ದವರಿಗೆ ಪ್ರತಿಕ್ರಿಯಿಸಿದರು.
ಅಧಿಕಾರಿಗಳ ಹೇಳಿಕೆ: ಬರಗಾಲದ ನಿಮಿತ್ತ ಸರಕಾರದ ಯೋಜನೆ ಪ್ರಕಾರ ನೀರು ಸರಬರಾಜು ಮಾಡಲು ಬೋರ್‌ವೆಲ್ ಹಾಕಿಸಲಾಗುತ್ತಿದೆ. ಇದಕ್ಕೆ ಸ್ಥಳೀಯ ಜನರು ಖಾಸಗಿ ಬಾವಿ ನೀರು ಬತ್ತಿ ಹೋಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಇಲ್ಲಿನ ನೀರನ್ನು ಅವರೂ ಕೂಡ ಬಳಸಬಹುದು. ಪ್ರತಿಭಟನೆ ಹೆಚ್ಚಾಗುತ್ತಿದ್ದಂತೆ, ಪೊಲೀಸ್ ರಕ್ಷಣೆ ಪಡೆಯುವುದು ಅನಿವಾರ್ಯವಾಗಿದ್ದರಿಂದ ತಹಶೀಲ್ದಾರರು ಪೊಲೀಸ್‌ರನ್ನು ಕರೆಯಿಸಿದರು. ನಿಯೋಜಿತ ಕಾಮಗಾರಿ ನಡೆಸಲಾಗಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ತಿಳಿಸಿದರು.







