ಕೊಡಗು ಜಿಪಂ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

ಮಡಿಕೇರಿ, ಎ.29: ಕೊಡಗು ಜಿಲ್ಲಾ ಪಂಚಾಯತ್‌ನ 21ನೆ ಅಧ್ಯಕ್ಷರಾಗಿ ಬಿ.ಎ.ಹರೀಶ್ ಹಾಗೂ 13ನೆ ಉಪಾಧ್ಯಕ್ಷರಾಗಿ ಲೋಕೇಶ್ವರಿ ಗೋಪಾಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕೋಟೆ ಹಳೆ ವಿಧಾನ ಸಭಾಂಗಣದಲ್ಲಿ ನಡೆದ ಜಿಲ್ಲಾ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣಾ ಪ್ರಕ್ರಿಯೆ ಸಂದರ್ಭ ಅಧ್ಯಕ್ಷ ಸ್ಥಾನಕ್ಕೆ ಕಡಗದಾಳು ಕ್ಷೇತ್ರದ ಜಿಪಂ ಸದಸ್ಯ ಬಿ.ಎ. ಹರೀಶ್ ಹಾಗೂ ಶಾಂತಳ್ಳಿ ಕ್ಷೇತ್ರದ ಲೋಕೇಶ್ವರಿ ಗೋಪಾಲ್ ತಲಾ ಎರಡು ನಾಮಪತ್ರಗಳನ್ನು ಸಲ್ಲಿಸಿದ್ದರು. ನಾಮಪತ್ರ ಪರಿಶೀಲನೆಯ ನಿಗದಿತ ಸಮಯ ಮಧ್ಯಾಹ್ನ 1 ಗಂಟೆಯ ವೇಳೆೆಗೆ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಪ್ರಾದೇಶಿಕ ಆಯುಕ್ತ ಎ.ಎಂ. ಕುಂಜಪ್ಪಅವರು ಎರಡೂ ನಾಮಪತ್ರಗಳು ಕ್ರಮಬದ್ಧ ವಾಗಿರುವುದಾಗಿ ತಿಳಿಸಿದರು. ಎರಡೂ ಸ್ಥಾನಗಳಿಗೆ ತಲಾ ಒಬ್ಬೊಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದ ಕಾರಣ ಬಿ.ಎ. ಹರೀಶ್ ಅವರು ಅಧ್ಯಕ್ಷರಾಗಿ ಹಾಗೂ ಲೋಕೇಶ್ವರಿ ಗೋಪಾಲ್ ಅವರು ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿರುವುದಾಗಿ ಘೋಷಿಸಿದರು. ಪಂಚಾಯತ್ ರಾಜ್ ಕಾಯ್ದೆಯ ನೂತನ ನಿಯಮದ ಪ್ರಕಾರ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಅಧಿಕಾರದ ಅವಧಿ 5 ವರ್ಷಗಳಾಗಿದ್ದು, ಈ ಪ್ರಕಾರ 2016 ಎ.29 ರಿಂದ 2021ರ ಎ.28ರವರೆಗೆ ಅಧಿಕಾರವಿರುತ್ತದೆ ಎಂದು ಎ.ಎಂ. ಕುಂಜಪ್ಪ ತಿಳಿಸಿದರು.
ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ವೇದಿಕೆಗೆ ಆಹ್ವಾನಿಸಿ ಶುಭ ಕೋರುವುದರೊಂದಿಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಂಡಿತು. ಸಭೆಯಲ್ಲಿ ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾದ ಕೆ.ಎಂ.ಗಾಯತ್ರಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಾರುಲತಾ ಸೋಮಲ್ ಹಾಗೂ ಮುಖ್ಯ ಯೋಜನಾಧಿಕಾರಿ ತಾಕತ್ ರಾವ್ ಉಪಸ್ಥಿತರಿದ್ದರು.
ಕಾಂಗ್ರೆಸ್ ಸದಸ್ಯರ ಗೈರು: ಚುನಾವಣಾ ಪ್ರಕ್ರಿಯೆ ಸಂದರ್ಭ ಬಿಜೆಪಿಯ 18, ಕಾಂಗ್ರೆಸ್‌ನ ಮೂವರು ಹಾಗೂ ಜೆಡಿಎಸ್‌ನ ಒಬ್ಬರು ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ಏಳು ಮಂದಿ ಕಾಂಗ್ರೆಸ್ ಸದಸ್ಯರು ಗೈರು ಹಾಜರಾಗಿದ್ದರು. ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಸದಸ್ಯರು ಶುಭಕೋರಿದರು.
ಅಭಿನಂದನೆ,ಮೆರವಣಿಗೆ: ಚುನಾವಣಾ ಪ್ರಕ್ರಿಯೆಯ ಬಳಿಕ ಸಭಾಂಗಣಕ್ಕೆ ಆಗಮಿಸಿದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮನು ಮುತ್ತಪ್ಪ, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಎಸ್.ಎನ್. ರಾಜಾರಾವ್, ಜಿಪಂ ಮಾಜಿ ಉಪಾಧ್ಯಕ್ಷರಾದ ಉಷಾ ದೇವಮ್ಮ, ಬೀನಾ ಬೊಳ್ಳಮ್ಮ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಸೇರಿದಂತೆ ಹಲವು ಗಣ್ಯರು ಹಾಗೂ ಬಿಜೆಪಿ ಪ್ರಮುಖರು ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿದರು. ನಂತರ ವಾದ್ಯಗೋಷ್ಠಿಗಳೊಂದಿಗೆ ಶಾಸಕರ ಸಹಿತ ನಗರದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.







