ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ: ವಿನಯ್‌ಕುಮಾರ್ ಸೊರಕೆ
ಚಿಕ್ಕಮಗಳೂರು, ಎ.29: ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ವಿವಿಧ ಜಿಲ್ಲೆಗಳಲ್ಲಿ ಮುಂಜಾಗ್ರತಾ ಕ್ರಮ ಗಳನ್ನು ಅನುಸರಿಲಾಗಿದೆ. ಅದರಂತೆ ಚಿಕ್ಕ ಮಗಳೂರು ಜಿಲ್ಲೆಯ ಪುರಸಭೆ, ನಗರಸಭೆಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಪೂರೈಕೆಯ ಬಗ್ಗೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಜಿಲ್ಲೆಯಲ್ಲಿ, ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ವಿನಯ್‌ಕುಮಾರ್ ಸೊರಕೆ ತಿಳಿಸಿದ್ದಾರೆ.
ಅವರು ಶುಕ್ರವಾರ ನಗರದ ಸುದ್ದಿಗಾರರೊಂದಿಗೆ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಇರುವೆಡೆ ತಾತ್ಕಾಲಿಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಈಗಾಗಲೇ ಅಗತ್ಯ ಅನುದಾನ ಬಿಡುಗಡೆ ಮಾಡಲಾಗಿದೆ. ಭವಿಷ್ಯದಲ್ಲಿ ನೀರಿನ ಸಮಸ್ಯೆಯನ್ನು ಪರಿಹರಿಸಲು ಕೊಳವೆ ಬಾವಿ ಕೊರೆಯಿಸುವುದು, ಕೊಳವೆ ಬಾವಿಗಳ ಪುನಶ್ಚೇತನ, ಪೈಪ್ ಅಳವಡಿಕೆ ಕಾಮಗಾರಿಗಳಿಗೆ ಯಾವುದೇ ಟೆಂಡರ್ ಕರೆಯದೇ ಅನುದಾನ ಬಿಡುಗಡೆ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಎಸ್.ಎಫ್.ಸಿ ಯೋಜನೆಯಡಿ ಚಿಕ್ಕಮಗಳೂರು ಜಿಲ್ಲೆಯ ಘನ ತ್ಯಾಜ್ಯ ನಿರ್ವಹಣೆಗೆ 48.78 ಕೋಟಿ ರೂ. ಹಾಗೂ ಕುಡಿಯುವ ನೀರಿಗಾಗಿ 8.5 ಕೋಟಿ ರೂ. ಬಿಡುಗಡೆ ಮಾಡಲಾಗಿದೆ, 103 ಕೋಟಿ ರೂ. ಗಳನ್ನು ಕುಡಿಯುವ ನೀರಿನ ಶಾಶ್ವತ ಪರಿಹಾರ ಕಾಮಗಾರಿಗೆ ಮೀಸಲಿದ್ದು, ಚಿಕ್ಕಮಗಳೂರು, ಬೀರೂರು, ಮೂಡಿಗೆರೆಗಳಲ್ಲಿ ಒಳ ಚರಂಡಿ ಮತ್ತು ಕುಡಿಯುವ ನೀರಿನ ಪೈಪ್ ಲೈಲ್ ಕಾಮಗಾರಿಗಳು ನಡೆಯುತ್ತಿವೆ ಎಂದರು.
ಚಿಕ್ಕಮಗಳೂರು ಜಿಲ್ಲೆಯನ್ನು ಅಮೃತ್ ಸ್ಕೀಂಗೆ ಸೇರಿಸ ಲಾಗಿದ್ದು, 1,18,000 ಜನಸಂಖ್ಯೆಯುಳ್ಳ ರಾಜ್ಯದ 27 ನಗರಗಳನ್ನು ಈ ಯೋಜನೆಗೆ ಸೇರಿಸಲಾಗಿದೆ. ಅಮೃತ್ ಸ್ಕೀಮ್ ಯೋಜನೆಗೆ ಕೇಂದ್ರ ಸರಕಾರವು ನೂರು ಕೋಟಿ ರೂ. ಹಾಗೂ ರಾಜ್ಯ ಸರಕಾರವು ನೂರು ಕೋಟಿ ರೂ. ಗಳನ್ನು ನೀಡಲಿದೆ ಎಂದು ನುಡಿದರು.
ನಗರದಲ್ಲಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲು ಇಂಜಿನಿಯರ್‌ಗಳ ಕೊರತೆಯಿದ್ದು, ಕೊರತೆ ನೀಗಿಸಲು ಮೈಸೂರಿನಿಂದ ಇಂಜಿನಿಯೊಬ್ಬರನ್ನು ಚಿಕ್ಕಮಗಳೂರಿಗೆ ನೇಮಿಸಲಾಗಿದೆ. ಅಗತ್ಯವಿರುವ ಹೆಚ್ಚುವರಿ ಇಂಜಿನಿಯರ್ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನಿವೃತ್ತ ಇಂಜಿನಿಯರ್‌ಗಳನ್ನು ನೇಮಕ ಮಾಡಿಕೊಳ್ಳಲು ಟೆಂಡರ್ ಆಹ್ವಾನಿಸಲಾಗಿದೆ ಎಂದು ಹೇಳಿದರು.
ನಗರಾಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇರುವ ಎಬಿಸಿ ಬಿ.ಹಂತದ ನೌಕರರನ್ನು ನೇಮಕ ಮಾಡಿಕೊಳ್ಳುವ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದ ಅವರು, ಪೌರಸೇವಾ ನೌಕರರ ನೇಮಕಾತಿಗೆ ವಿದ್ಯಾರ್ಹತೆಯನ್ನು ಮಾನದಂಡವಾಗಿಸಿ ಕೊಳ್ಳದೇ ನೇಮಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಪೌರ ಕಾರ್ಮಿಕರಿಗೆ ಕನಿಷ್ಠ 8 ಸಾವಿರ ರೂ. ಆರೋಗ್ಯ ಮತ್ತು ಇತರ ಭತ್ತೆಗಳು ಸೇರಿ ಕನಿಷ್ಟ 13 ಸಾವಿರ ರೂ. ವೇತನ ನಿಗದಿಪಡಿಸಿ, ಪೌರ ಕಾರ್ಮಿಕರ ಕೈಗೆ ನೇರವಾಗಿ ಸಿಗು ವಂತೆ ಮಾಡಲಾಗುವುದು. ಪೌರಸೇವಾ ನೌಕರರಿಗೆ ಗೃಹಭಾಗ್ಯ ಯೋಜನೆಯಡಿ 7.50 ಲಕ್ಷ ರೂ. ವೆಚ್ಚದಲ್ಲಿ ಅಗತ್ಯವಿರುವ ಮನೆಗಳನ್ನು ಕಟ್ಟಲು ಯೋಜನೆ ರೂಪಿಸಲಾಗಿದೆ. ವಸತಿ ಯೋಜನೆಯಡಿ ಮನೆಗಳನ್ನು 3ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣಕ್ಕೆ ಅನುದಾನ ನೀಡಲು ನಿರ್ಧರಿಸಲಾಗಿದೆ ಎಂದು ನುಡಿದರು. ಸರಕಾರಿ ನಿವೇಶನಗಳಲ್ಲಿ ಮನೆ ಕಟ್ಟಿಕೊಂಡಿ ರುವ ಪೌರಸೇವಾ ನೌಕರರಿಗೆ ನಿವೇಶನಗಳ ಹಕ್ಕುಪತ್ರ ನೀಡಲು ಅರ್ಜಿ ಆಹ್ವಾನಿಸಿ ಅವರಿಗೆ ಹಕ್ಕುಪತ್ರ ನೀಡಲಾಗುವುದು ಎಂದರು.
ಪೌರ ಕಾರ್ಮಿಕರ ಶೋಷಣೆ ತಪ್ಪಿಸಲು ಸರಕಾರ ಬದ್ಧ: ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಸೇವಾ ನೌಕರರು ಗುತ್ತಿಗೆದಾರರಿಂದ ಶೋಷಣೆಗೆ ಒಳಗಾಗುವುದನ್ನು ತಪ್ಪಿಸಲು ಗುತ್ತಿಗೆ ಪದ್ಧತಿ ನಿರ್ಮೂಲನೆಗೆ ಸರಕಾರ ನಿರ್ಧರಿಸಿದೆ. ಪೌರಸೇವಾ ನೌಕರರಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಲು ಹರಿಯಾಣ ಮಾದರಿಯ ವ್ಯವಸ್ಥೆಯನ್ನು ಜಾರಿಗೊಳಿಸಲು ಅಡ್ವೋಕೇಟ್ ಜನರಲ್‌ರವರ ಅಭಿಪ್ರಾಯವನ್ನು ಪಡೆದಿದ್ದು, ಮುಂದಿನ ಅಧಿವೇಶನದಲ್ಲಿ ಸದನದಲ್ಲಿ ಚರ್ಚಿಸಿ ಅನುಷ್ಠಾನಗೊಳಿಸಲಾಗುವುದು ಎಂದು ಸಚಿವ ಸೊರಕೆ ಹೇಳಿದರು.







