ಕೇಜ್ರಿವಾಲ್‌ಗೆ ಮೋದಿ ಪದವಿಗಳ ವಿವರ ನೀಡುವಂತೆ ದಿಲ್ಲಿ ವಿವಿಗೆ ಸಿಐಸಿ ಆದೇಶ

ಹೊಸದಿಲ್ಲಿ,ಎ.29: ಅಸಾಧಾರಣ ನಡೆಯೊಂದರಲ್ಲಿ ಕೇಂದ್ರ ಮಾಹಿತಿ ಆಯೋಗವು ಪ್ರಧಾನಿ ನರೇಂದ್ರ ಮೋದಿಯವರು ಗಳಿಸಿರುವ ಪದವಿಗಳ ಕುರಿತು ಮಾಹಿತಿಯನ್ನು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ನೀಡುವಂತೆ ದಿಲ್ಲಿ ಮತ್ತು ಗುಜರಾತ್ ವಿಶ್ವವಿದ್ಯಾನಿಲಯಗಳಿಗೆ ಶುಕ್ರವಾರ ನಿರ್ದೇಶ ನೀಡಿದೆ. ತನ್ನ ಕಾರ್ಯನಿರ್ವಹಣೆಯನ್ನು ಕೇಜ್ರಿವಾಲ್ ಟೀಕಿಸಿದ ನಂತರ ಆಯೋಗವು ಈ ಕ್ರಮ ಕೈಗೊಂಡಿದೆ.
ದಾಖಲೆಗಳನ್ನು ಪತ್ತೆ ಹಚ್ಚುವುದನ್ನು ಸುಲಭವಾಗಿಸಲು ದಿಲ್ಲಿ ಮತ್ತು ಗುಜರಾತ ವಿವಿಗಳಿಗೆ ಪ್ರಧಾನ ಮಂತ್ರಿಯವರು ಗಳಿಸಿರುವ ಪದವಿಗಳ ನಿರ್ದಿಷ್ಟ ಸಂಖ್ಯೆ ಮತ್ತು ವರ್ಷಗಳನ್ನು ಒದಗಿಸುವಂತೆ ಪ್ರಧಾನಿ ಕಚೇರಿಗೂ ಮಾಹಿತಿ ಆಯುಕ್ತ ಶ್ರೀಧರ ಆಚಾರ್ಯಲು ಅವರು ನಿರ್ದೇಶ ನೀಡಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧಿಸಲು ಪದವಿ ಆಧಾರಿತ ಶಿಕ್ಷಣಾರ್ಹತೆಯನ್ನು ನಿಗದಿಗೊಳಿಸಿಲ್ಲ ಎನ್ನುವುದು ಭಾರತೀಯ ಪ್ರಜಾಸತ್ತೆಯ ಪ್ರಮುಖ ಲಕ್ಷಣವಾಗಿದೆ. ಬೇಕಾಗಿರುವುದು ಶಿಕ್ಷಣವೇ ಹೊರತು ಪದವಿಗಳಲ್ಲ. ಆದರೂ ಮುಖ್ಯಮಂತ್ರಿ ಹುದ್ದೆಯಲ್ಲಿರುವ ನಾಗರಿಕರೋರ್ವರು ಪ್ರಧಾನ ಮಂತ್ರಿಯ ಪದವಿ ಕುರಿತ ಮಾಹಿತಿಯನು ತಿಳಿಯಲು ಬಯಸಿರುವಾಗ ಅದನ್ನು ಬಹಿರಂಗಗೊಳಿಸುವುದು ಸೂಕ್ತವಾಗುತ್ತದೆ ಎಂದು ಕೇಜ್ರಿವಾಲ ಅವರ ವಿವರಣೆಯನ್ನೇ ಆರ್‌ಟಿಐ ಅರ್ಜಿಯನ್ನಾಗಿ ಪರಿಗಣಿಸಿದ ತನ್ನ ಆದೇಶದಲ್ಲಿ ಹೇಳಿದರು.
ಆರ್‌ಟಿಐ ಅರ್ಜಿದಾರರು ಕೋರಿರುವ ಮಾಹಿತಿಗಳನ್ನು ಹಂಚಿಕೊಳ್ಳಲು ತಾನು ಸಿದ್ಧನಿದ್ದೇನೆ. ಹಾಗೆಯೇ ಸಿಐಸಿ ಕೂಡ ಮೋದಿಯವರ ವಿದ್ಯಾರ್ಹತೆಯನ್ನು ಬಹಿರಂಗಗೊಳಿಸಲು ಆದೇಶಿಸಬೇಕು ಎಂದು ಖಡಕ್ಕಾದ ಪತ್ರವನ್ನು ಕೇಜ್ರಿವಾಲ್ ಸಿಐಸಿಗೆ ಬರೆದಿದ್ದರು.





