ಸೈನಾ ನೆಹ್ವಾಲ್ ಸೆಮಿಫೈನಲ್‌ಗೆ

ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್
ವುಹಾನ್(ಚೀನಾ), ಎ.29: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಇಲ್ಲಿ ನಡೆಯುತ್ತಿರುವ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಪ್ರದರ್ಶನವನ್ನು ಮುಂದುವರಿಸಿದ್ದು ಮಹಿಳೆಯರ ಸಿಂಗಲ್ಸ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದಾರೆ.
ಇಲ್ಲಿ ಶುಕ್ರವಾರ 56 ನಿಮಿಷಗಳಲ್ಲಿ ಕೊನೆಗೊಂಡ ಮಹಿಳೆಯರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 26ರ ಹರೆಯದ ಸೈನಾ ಅವರು ಮಾಜಿ ವಿಶ್ವ ಚಾಂಪಿಯನ್ ಚೀನಾದ ಶಿಕ್ಸಿಯಾನ್ ವಾಂಗ್‌ರನ್ನು 21-16, 21-19 ಗೇಮ್‌ಗಳ ಅಂತರದಿಂದ ಮಣಿಸಿದರು.
ವಿಶ್ವದ ನಂ.8ನೆ ಆಟಗಾರ್ತಿ ಸೈನಾ ಸ್ವಿಸ್ ಗ್ರಾನ್ ಪ್ರಿ ಗೋಲ್ಡ್, ಇಂಡಿಯಾ ಸೂಪರ್ ಸರಣಿ ಹಾಗೂ ಮಲೇಷ್ಯಾ ಸೂಪರ್ ಸರಣಿಯಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದರು. ಇದೀಗ ಮತ್ತೊಮ್ಮೆ ಸೆಮಿ ಫೈನಲ್ ತಲುಪಿರುವ ಸೈನಾ ಅಂತಿಮ ನಾಲ್ಕರ ಸುತ್ತಿನಲ್ಲಿ ಜಪಾನ್‌ನ ನೊರೊಮಿ ಒಕುಹರಾ ಅಥವಾ ಚೀನಾದ ಯಿಹಾನ್ ವಾಂಗ್‌ರನ್ನು ಎದುರಿಸಲಿದ್ದಾರೆ.
ಸೈನಾ ಚೀನಾದ ಶಿಕ್ಸಿಯಾನ್ ವಿರುದ್ಧ ಈ ಹಿಂದೆ ಆಡಿರುವ ಎರಡು ಪಂದ್ಯಗಳಲ್ಲಿ ಸೋತಿದ್ದರು. ಶುಕ್ರವಾರ ಇಲ್ಲಿ ನಡೆದ ಪಂದ್ಯದಲ್ಲಿ ಆರಂಭದಲ್ಲೇ ಮುನ್ನಡೆ ಸಾಧಿಸಿದ್ದ ಸೈನಾ ಮೊದಲ ಗೇಮ್‌ನ್ನು 21-16 ಅಂತರದಿಂದ ಗೆದ್ದುಕೊಂಡರು. ಎರಡನೆ ಗೇಮ್‌ನಲ್ಲೂ ಆರಂಭದಲ್ಲಿ ಮೇಲುಗೈ ಸಾಧಿಸಿದ್ದ ಸೈನಾ ಅಂತಿಮವಾಗಿ 21-19 ಅಂತರದಿಂದ ರೋಚಕವಾಗಿ ಗೇಮ್‌ನ್ನು ಗೆದ್ದುಕೊಂಡರು.







