ನಿರ್ದೇಶನ ಹಿಂಪಡೆಯಲು ನಿರಾಕರಿಸಿದ ಹೈಕೋರ್ಟ್
ರಾಘವೇಶ್ವರಶ್ರೀ ಪದಚ್ಯುತಿಗೆ ಪಿಐಎಲ್ ಸಲ್ಲಿಕೆ

ಬೆಂಗಳೂರು, ಎ.29: ರಾಘವೇಶ್ವರ ಭಾರತಿ ಸ್ವಾಮೀಜಿ ಅವರನ್ನು ಹೊಸನಗರದ ರಾಮಚಂದ್ರಾಪುರ ಮಠದ ಪೀಠಾಧಿಪತಿ ಸ್ಥಾನದಿಂದ ಕೆಳಗಿಳಿಸಿ, ಮಠಕ್ಕೆ ಆಡಳಿತಾಧಿಕಾರಿ ನೇಮಿಸಬೇಕೆಂಬ ಮನವಿ ಕುರಿತು ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸುವಂತೆ ಕೆಲ ಭಕ್ತಾದಿಗಳಿಗೆ ನೀಡಿದ್ದ ನಿರ್ದೇಶನ ಹಿಂಪಡೆಯಲು ಹೈಕೋರ್ಟ್ ನಿರಾಕರಿಸಿತು.
ಅತ್ಯಾಚಾರ ಆರೋಪ ಎದುರಿಸುತ್ತಿರುವ ರಾಘವೇಶ್ವರ ಭಾರತಿ ಸ್ವಾಮೀಜಿ ಅವರನ್ನು ರಾಮಚಂದ್ರಾಪುರ ಮಠದಿಂದ ಪೀಠಾಧಿಪತಿ ಸ್ಥಾನದಿಂದ ಕೆಳಗಿಳಿಸಬೇಕು. ಹಾಗೆಯೇ, ಮಠವನ್ನು ಸುಪರ್ದಿಗೆ ಪಡೆದು ಆಡಳಿತ ನಿರ್ವಹಣೆಗೆ ಆಡಳಿತಾಧಿಕಾರಿ ನೇಮಿಸುವಂತೆ ಸರಕಾರಕ್ಕೆ ಆದೇಶಿಸಬೇಕು ಎಂದು ಕೋರಿ ಎಡುರ್ಕಳ ಈಶ್ವರಭಟ್ ಸೇರಿದಂತೆ ಮಠದ ಆರು ಭಕ್ತಾದಿಗಳು ಹೈಕೋರ್ಟ್‌ಗೆ ಪಿಐಎಲ್ ಅರ್ಜಿ ಸಲ್ಲಿಸಿದ್ದರು.
ಗುರುವಾರ ಈ ಅರ್ಜಿ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಮತ್ತು ನ್ಯಾ.ರವಿ ಮಳೀಮಠ ಅವರಿದ್ದ ವಿಭಾಗೀಯ ಪೀಠ, ಈ ಕೋರಿ ಪರಿಗಣಿಸಲು ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿಪತ್ರ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚಿಸಿತ್ತು.
ಈ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ರಾಘವೇಶ್ವರ ಭಾರತಿ ಸ್ವಾಮೀಜಿ ಪರ ವಕೀಲರು ಮುಖ್ಯ ನಾಯಮೂರ್ತಿಯವರ ನ್ಯಾಯಪೀಠದ ಮುಂದೆ ಹಾಜರಾದರು. ರಾಘವೇಶ್ವರ ಸ್ವಾಮೀಜಿ ಅವರನ್ನು ಪೀಠಾಧಿಪತಿ ಸ್ಥಾನದಿಂದ ಕೆಳಗಿಸುವ ಸಂಬಂಧ ಸರಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಪತ್ರ ಸಲ್ಲಿಸುವಂತೆ ಅರ್ಜಿದಾರರಿಗೆ ನೀಡಿದ್ದ ನಿರ್ದೇಶನ ಹಿಂಪಡೆಯುವಂತೆ ವಕೀಲರು ಕೋರಿದರು.
ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಪ್ರತಿಕ್ರಿಯಿಸಿ, ಮನವಿ ಸಲ್ಲಿಸಿದ ಕೂಡಲೇ ಮುಖ್ಯ ಕಾರ್ಯದರ್ಶಿಗಳು ಕ್ರಮಕ್ಕೆ ಮುಂದಾಗುವುದಿಲ್ಲ. ಅರ್ಜಿದಾರರು ಮತ್ತು ಸ್ವಾಮೀಜಿ ಅವರ ವಾದ ಆಲಿಸಿ ಸೂಕ್ತ ತಿರ್ಮಾನ ತೆಗೆದುಕೊಳ್ಳುತ್ತಾರೆ. ಹೀಗಾಗಿ, ನ್ಯಾಯಾಲಯ ಅರ್ಜಿ ಸಂಬಂಧ ಸದ್ಯ ಯಾವುದೇ ನಿರ್ಧಾರ ಪ್ರಕಟಿಸುವುದಿಲ್ಲ. ಎಡುರ್ಕಳ ಈಶ್ವರಭಟ್ಟ ಅವರು ಸಲ್ಲಿಸಿದ ಅರ್ಜಿ ಬೇಸಿಗೆ ರಜೆ ಕಾಲದ ನಂತರ ಮತ್ತೆ ವಿಚಾರಣೆಗೆ ಬರಲಿದೆ. ಆ ವೇಳೆ ನಿಮ್ಮ ವಾದ ಆಲಿಸುವುದಾಗಿ ತಿಳಿಸಿದರು. ಆದರೆ, ವಕೀಲರು ತಮ್ಮ ವಾದ ಮುಂದುವರಿಸಿ, ಭಕ್ತಾದಿಗಳು ಸಲ್ಲಿಸಿದ ಪಿಐಎಲ್ ಅರ್ಜಿ ವ್ಯಾಪ್ತಿಗೆ ಬರುವುದಿಲ್ಲ. ದುರುದ್ದೇಶಪೂರ್ವಕವಾಗಿ ರಾಘವೇಶ್ವರ ಸ್ವಾಮೀಜಿ ವಿರುದ್ಧ ಅರ್ಜಿ ಸಲ್ಲಿಸಲಾಗಿದೆ. ಹೀಗಾಗಿ, ಅರ್ಜಿ ವಜಾಗೊಳಿಸಬೇಕು ಎಂದು ಕೋರಿದರು.
ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸುವಂತೆ ನ್ಯಾಯಪೀಠ ಅರ್ಜಿದಾರರಿಗೆ ಸೂಚನೆ ನೀಡಿದೆ. ರಾಮಚಂದ್ರಾಪುರ ಮಠ ಖಾಸಗಿ ಸಂಸ್ಥೆಯಾಗಿದೆ. ಆದರೆ, ಸರಕಾರಿ ಸಂಸ್ಥೆಗಳ ವಿರುದ್ಧ ದಾಖಲಾಗುವ ಪ್ರಕರಣಗಳಲ್ಲಿ ಮಾತ್ರ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಬಹುದು. ಹೀಗಾಗಿ, ಅರ್ಜಿದಾರರಿಗೆ ನೀಡಿದ ನಿರ್ದೇಶನ ಹಿಂಪಡೆಯುವಂತೆ ಕೋರಿದರು. ವಕೀಲರ ಮನವಿ ಮಾನ್ಯ ಮಾಡಲು ನ್ಯಾಯಪೀಠ ನಿರಾಕರಿಸಿತು.





