ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ: ಅಮೆರಿಕ

ಇಟಾನಗರ, ಎ.29: ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಭಾಗವೆಂಬುದು ಅಮೆರಿಕ ಸರಕಾರಕ್ಕೆ ಸ್ಟಷ್ಟವಿದೆಯೆಂದು ಅಮೆರಿಕನ್ ಕಾನ್ಸುಲ್ ಜನರಲ್ ಕ್ರೈಗ್ ಹಾಲ್ ಹೇಳಿದ್ದಾರೆ.
ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಕಾಲಿಖೊ ಪುಲ್‌ರನ್ನು ಭೇಟಿಯಾಗಿದ್ದ ವೇಳೆ, ಚೀನಾವು ಅರುಣಾಚಲ ಪ್ರದೇಶವು ತನ್ನದೆಂದು ಆಗಾಗ ಪ್ರತಿಪಾದಿಸುತ್ತಿರುವುದನ್ನುಲ್ಲೇಖಿಸಿ ಅವರು ಈ ರೀತಿ ಸ್ಪಷ್ಟಪಡಿಸಿದ್ದಾರೆ.
ಚೀನಾವು ಅರುಣಾಚಲ ಪ್ರದೇಶ ಹಾಗೂ ಅಸ್ಸಾಂನ ಕೆಲವು ಭಾಗಗಳನ್ನು ತನ್ನ ಪ್ರಾಂತ್ಯಗಳೆಂದು ಚಿತ್ರಿಸಿರುವ ಗೂಗಲ್ ಭೂಪಟಗಳನ್ನು ಸರಿಪಡಿಸುವಂತೆ ಪುಲ್, ಹಾಲ್‌ರ ಮೂಲಕ ಅಮೆರಿಕ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಈಶಾನ್ಯ ಭಾರತದ ಮೂಲಕ ರಸ್ತೆ ಸಂಪರ್ಕ ಅಭಿವೃದ್ಧಿಯಾದರೆ ಭಾರತದ ಪೂರ್ವದತ್ತ ಕಾರ್ಯಾಚರಣೆ ನೀತಿಯು ಇನ್ನಷ್ಟು ಬಲಗೊಳ್ಳಬಹುದು. ಅರುಣಾಚಲ ಪ್ರದೇಶವು ಮ್ಯಾನ್ಮಾರ್, ಭೂತಾನ್ ಹಾಗೂ ಚೀನಾಗಳೊಂದಿಗೆ ಅಂತಾರಾಷ್ಟ್ರೀಯ ಗಡಿಗಳನ್ನು ಪಡೆದು, ವ್ಯೆಹಾತ್ಮಕವಾಗಿ ಪ್ರಮುಖ ಸ್ಥಾನದಲ್ಲಿದೆಯೆಂದು ಹಾಲ್ ಅಭಿಪ್ರಾಯಿಸಿದ್ದಾರೆ.
ಅಮೆರಿಕದ ಖಾಸಗಿ ಕಂಪೆನಿಗಳು ಪ್ರದೇಶದಲ್ಲಿ ಉತ್ತಮ ಸಂಪರ್ಕವನ್ನು ಎದುರು ನೋಡುತ್ತಿವೆ. ಅದರಿಂದ ಅಭಿವೃದ್ಧಿ ಚಟುವಟಿಕೆಗಳ ವೇಗವರ್ಧನೆಯಾಗುವುದೆಂದು ಅವು ನಂಬಿವೆ. ವಾಸ್ತವವಾಗಿ ಅಮೆರಿಕ ಸರಕಾರವು ಈಶಾನ್ಯ ಭಾರತದೊಂದಿಗೆ ವ್ಯಾಪಾರ ಅಭಿವೃದ್ಧಿಗಾಗಿ ಭಾರತ ದೊಂದಿಗೆ ಕೆಲಸ ಮಾಡುತ್ತಿದೆ.
ಈ ಪ್ರದೇಶವು ಜಲ ವಿದ್ಯುತ್ ಹಾಗೂ ಪ್ರವಾಸೋದ್ಯಮ ವಲಯಗಳಲ್ಲಿ ಸಾಧ್ಯತೆಯನ್ನು ಪಡೆದಿದೆಯೆಂದು ಅವರು ಹೇಳಿದ್ದಾರೆ.ಅಮೆರಿಕದ ಕಂಪೆನಿಗಳಿಗೆ ಜಾಹೀರಾತನ್ನು ಕಳುಹಿಸಲು ಅನುಕೂಲವಾಗುವಂತೆ ರಾಜ್ಯದ ಜಲವಿದ್ಯುತ್ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಜಾಗತಿಕ ಟೆಂಡರ್ ಕರೆಯಬೇಕೆಂಬ ತನ್ನ ಅಭಿಪ್ರಾಯವನ್ನು ಹಾಲ್, ಮುಖ್ಯಮಂತ್ರಿ ಪುಲ್‌ರ ಮುಂದಿರಿಸಿದ್ದಾರೆಂದು ಪ್ರಕಟನೆ ತಿಳಿಸಿದೆ.
ರಸ್ತೆ ಸಂಪರ್ಕ ಅಭಿವೃದ್ಧಿ ಹಾಗೂ ರಾಜ್ಯದ ಜಲವಿದ್ಯುತ್ ಲಾಭ ಪಡೆಯಲು ಅಮೆರಿಕದ ಬೆಂಬಲ ಕೋರಿದ ಪುಲ್, ಅರುಣಾಚಲ ಪ್ರದೇಶದಲ್ಲಿ ಹೂಡಿಕೆ ಮಾಡುವ ಮುಕ್ತ ಮನೋಭಾವವನ್ನು ಪಾಶ್ಚಾತ್ಯ ಹೂಡಿಕೆದಾರರು ತೋರಿಸಬೇಕು. ಮುಖ್ಯವಾಗಿ ಪ್ರಾಕೃತಿಕ ವಿಕೋಪಗಳನ್ನು ನಿಭಾಯಿಸಲು ತರಬೇತಿ, ಬೆಂಬಲ ಹಾಗೂ ಉಪಕರಣಗಳಲ್ಲಿ ಸಾಮರ್ಥ್ಯ ಹೆಚ್ಚಳಕ್ಕೆ ನೆರವಾಗಬೇಕೆಂದು ಹೇಳಿದ್ದಾರೆ.







