ಸಂಜೋತಾ ಸ್ಫೋಟ ಪ್ರಕರಣ: ಶಂಕಿತ ಉಗ್ರನ ಅರ್ಜಿ ತಿರಸ್ಕರಿಸಿದ ಸುಪ್ರೀಂ

ಹೊಸದಿಲ್ಲಿ,ಎ.29: ವಿಚಾರಣಾ ನ್ಯಾಯಾಲಯ ದಲ್ಲಿ ತನ್ನ ವಿರುದ್ಧ ಆರೋಪಗಳನ್ನು ರೂಪಿಸಿ ರುವುದನ್ನು ಪ್ರಶ್ನಿಸಿರುವ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ, ಶಂಕಿತ ಉಗ್ರ ಲೆಕ ಪ್ರಸಾದ್ ಶ್ರೀಕಾಂತ್ ಪುರೋಹಿತ್ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ಶುಕ್ರವಾರ ನಿರಾಕರಿಸಿದ ಸರ್ವೋಚ್ಚ ನ್ಯಾಯಾಲಯವು,ಈ ವಿಷಯದಲ್ಲಿ ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಸೂಚಿಸಿತು.
ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ ಪ್ರಕರಣದಲ್ಲಿ ಪುರೋಹಿತ್ ಭಾಗಿಯಾಗಿಲ್ಲ ಮತ್ತು ಆತನ ವಿರುದ್ಧ ಯಾವುದೇ ಸಾಕ್ಷಾಧಾರ ಲಭ್ಯವಾಗಿಲ್ಲ ಎಂದು ಎನ್‌ಐಎ ವರಿಷ್ಠ ಶರದ್ ಕುಮಾರ್ ಅವರು ಕಳೆದ ವಾರ ಹೇಳಿದ್ದರು. ಸಂಜೋತಾ ಮತ್ತು ಮಾಲೆಗಾಂವ್ ಸ್ಫೋಟ ಪ್ರಕರಣಗಳಲ್ಲಿ ಪ್ರಮುಖ ಆರೋಪಿಗಳಲ್ಲೋರ್ವನಾಗಿರುವ ಪುರೋಹಿತ್ ಕಳೆದ ಏಳು ವರ್ಷಗಳಿಂದಲೂ ಜೈಲಿನಲ್ಲಿದ್ದಾನೆ.
ತನ್ನ ಸೇನಾ ಗೌರವವನ್ನು ಮರಳಿಸುವಂತೆ ಎ.4ರಂದು ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಅವರಿಗೆ ಪತ್ರವನ್ನು ಬರೆದಿದ್ದ ಆತ, ತನ್ನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ತಿಳಿಸಿದ್ದ. 2007, ಫೆ.18ರಂದು ಹರ್ಯಾಣದ ಪಾಣಿಪತ್ ಬಳಿ ಸಂಜೋತಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಾಂಬ್ ಸ್ಫೋಟಿಸಿ,68 ಜನರು ಸಾವನ್ನಪ್ಪಿದ್ದರು ಮತ್ತು 12 ಪ್ರಯಾಣಿಕರು ಗಾಯಗೊಂಡಿದ್ದರು.





