ಗುಜರಾತ್: ಮೇಲ್ಜಾತಿಗಳ ಬಡವರಿಗೂ ಮೀಸಲಾತಿ

ಅಹ್ಮದಾಬಾದ್, ಎ.29: ಮೇಲ್ಜಾತಿಗಳಲ್ಲಿ ಆರ್ಥಿಕವಾಗಿ ಹಿಂದುಳಿದಿರುವವರಿಗೆ ಶೇ.10 ಮೀಸಲಾತಿಯನ್ನು ಗುಜರಾತ್ ಸರಕಾರ ಶುಕ್ರವಾರ ಘೋಷಿಸಿದೆ. ಇದು, ಮೀಸಲಾತಿ ಸೌಲಭ್ಯಕ್ಕೆ ಆಗ್ರಹಿಸಿ ಕಳೆದ ವರ್ಷ ಹಿಂಸಾತ್ಮಕ ಚಳವಳಿಯೊಂದನ್ನು ನಡೆಸಿದ್ದ ರಾಜ್ಯದ ಪ್ರಭಾವಿ ಪಾಟಿದರ್ ಅಥವಾ ಪಟೇಲ್ ಸಮುದಾಯವನ್ನು ಸಂತೈಸುವ ಉದ್ದೇಶ ಹೊಂದಿದೆಯೆಂದು ವ್ಯಾಖ್ಯಾನಿಸಲಾಗಿದೆ.
ಗಾಂಧಿನಗರದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅಧ್ಯಕ್ಷತೆಯಲ್ಲಿ ನಡೆದ ಪಕ್ಷದ ಕೋರ್ ಕಮಿಟಿಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಇದು ವಾರ್ಷಿಕ ರೂ.6 ಲಕ್ಷಕ್ಕಿಂತ ಕಡಿಮೆ ಆದಾಯವಿರುವ ಎಲ್ಲ ಮೇಲ್ವರ್ಗದ ಕುಟುಂಬಗಳಿಗೆ ಲಾಭ ನೀಡಲಿದೆ.
ಆದರೆ, ಈ ಹೊಸ ಮೀಸಲಾತಿಯು, ಪ್ರಕೃತ ಒಬಿಸಿ, ಎಸ್ಸಿ ಹಾಗೂ ಎಸ್ಟಿಗಳಿಗಿರುವ ಶೇ.49 ಮೀಸಲಾತಿಯ ಹೊರತಾಗಿರುವುದರಿಂದ ಆನಂದಿ ಬೆನ್ ಸರಕಾರವು ಕಾನೂನು ತೊಡಕನ್ನು ಎದುರಿಸುವ ಸಂಭವವಿದೆ. ಸುಪ್ರೀಂಕೋರ್ಟ್‌ನ ಮಾರ್ಗಸೂಚಿ ಯಂತೆ ಶೇ.50ಕ್ಕಿಂತ ಹೆಚ್ಚು ಮೀಸಲಾತಿ ನೀಡುವಂತಿಲ್ಲ.
ತಾವು (ಬಿಜೆಪಿ ಹಾಗೂ ಗುಜರಾತ್ ಸರಕಾರ) ಅಗತ್ಯವಾದರೆ, ಯಾವುದೇ ಕಾನೂನು ಸಮರವನ್ನು ಪ್ರಾಮಾಣಿಕವಾಗಿ ನಡೆಸುತ್ತೇವೆ. ಇದಕ್ಕಾಗಿ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್‌ಗಳಿಗೂ ಹೋಗಲು ತಾವು ಸಿದ್ಧವೆಂದು ಗುಜರಾತ್ ಬಿಜೆಪಿಯ ಅಧ್ಯಕ್ಷ ವಿಜಯ್ ರೂಪಾನಿ ಹೇಳಿದ್ದಾರೆ.
ರಾಜ್ಯದ ಸ್ಥಾಪನಾ ದಿನವಾದ ಮೇ.1ರಂದು ತಾವು ಈ ಕುರಿತು ಅಧ್ಯಾದೇಶವೊಂದನ್ನು ಹೊರಡಿಸಲಿದ್ದೇವೆ. ಅದು, ಮುಂದಿನ ಶೈಕ್ಷಣಿಕ ವರ್ಷಾರಂಭವಾದ ಜೂನ್‌ನಿಂದ ಜಾರಿಗೆ ಬರಲಿದೆಯೆಂದು ಅವರು ತಿಳಿಸಿದ್ದಾರೆ.







