ನನ್ನದು ಬಲವಂತದ ದೇಶಭ್ರಷ್ಟತೆ: ಮಲ್ಯ

ಹೊಸದಿಲ್ಲಿ, ಎ.29: ತಾನು ‘ಬಲವಂತದ ದೇಶ ಭ್ರಷ್ಟತೆ’ ಅನುಭವಿಸುತ್ತಿದ್ದೇನೆಂದು ಬ್ಯಾಂಕ್‌ಗಳಿಗೆ ಸುಮಾರು 9 ಸಾವಿರ ಕೋಟಿ ರೂ. ಸಾಲ ಬಾಕಿ ಮಾಡಿ ವಿದೇಶಕ್ಕೆ ಪಲಾಯನ ಮಾಡಿರುವ ಮದ್ಯದೊರೆ ವಿಜಯ್ ಮಲ್ಯ ಬ್ರಿಟನ್‌ನ ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಕೇಂದ್ರ ಲಂಡನ್‌ನಲ್ಲಿ ‘ಫೈನಾನ್ಸಿಯಲ್ ಟೈಮ್ಸ್’ಗೆ ನೀಡಿದ ಸಂದರ್ಶನಲ್ಲಿ ಅವರು, ತಾನು ನೋವಿನ ಅಧ್ಯಾಯವನ್ನು ಅಂತ್ಯಗೊಳಿಸಬಯಸಿದ್ದೇನೆ. ‘‘ತಾನು ಸಾಲ ತೀರಿಸಲು ಬಯಸಿದ್ದೇನೆ’’ ಎಂದು ಬ್ಯಾಂಕ್‌ಗಳೊಂದಿಗೆ ಸತತ ಮಾತುಕತೆ ನಡೆಸಿದ್ದೇನೆ. ಆದರೆ, ತನ್ನಿಂದ ಸಾಧ್ಯವಾದಷ್ಟು ಮೊತ್ತವನ್ನು ಕಂತುಗಳಲ್ಲಿ ತೀರಿಸಲು ಇಚ್ಛಿಸಿದ್ದೇನೆ. ಅದನ್ನು ಈ ಹಿಂದೆ ಮಾಡಿರುವ ಮರು ಪಾವತಿಯ ಆಧಾರದಲ್ಲಿ ಬ್ಯಾಂಕ್‌ಗಳು ಸಮರ್ಥಿಸಿಕೊಳ್ಳ ಬಹುದೆಂದು ತಿಳಿಸಿದ್ದಾರೆ.
ತನ್ನನ್ನು ಬಂಧಿಸುವುದರಿಂದ ಅಥವಾ ಪಾಸ್‌ಪೋರ್ಟ್ ರದ್ದುಪಡಿಸುವುದರಿಂದ ಅವರಿಗೆ ಯಾವುದೇ ಹಣ ದೊರೆಯಲಾರದು. ಭಾರತದ ಇಂದಿನ ವಾತಾವರಣವನ್ನು ಅರ್ಥ ಮಾಡಿಕೊಳ್ಳುವುದು ಪ್ರಮುಖವಾಗಿದೆ. ವಿದ್ಯುನ್ಮಾನ ಮಾಧ್ಯಮವು ಕೇವಲ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಲು ಮಾತ್ರವಲ್ಲದೆ ಸರಕಾರವನ್ನೂ ಆಕ್ರೋಶಗೊಳಿಸುವಲ್ಲಿ ದೊಡ್ಡ ಪಾತ್ರ ವಹಿಸಿದೆಯೆಂದು ಮಲ್ಯ ಆರೋಪಿಸಿದ್ದಾರೆ. ಚಕ್ರಬಡ್ಡಿಯನ್ನು ಹೇರಿ, ಮೊತ್ತವನ್ನು ಕೃತಕವಾಗಿ ಹಿಗ್ಗಿಸುವುದು ಸಾರಾಸಗಟು ಅನ್ಯಾಯವಾಗಿದೆ.
ತಾನು ಮುಂದಿರಿಸಿದ್ದ ರೂ.4 ಸಾವಿರ ಕೋಟಿ ಅಂತಿಮ ಚುಕ್ತಾ ಮೊತ್ತವು ಕೆಟ್ಟ ಸಾಲಗಳ ತೀರುವಗಳಿಗೆ ವಿಶ್ವ ಬ್ಯಾಂಕ್ ನಿಗದಿಪಡಿಸಿರುವುದಕ್ಕಿಂತ ಬಹಳಷ್ಟು ಅಧಿಕವಾಗಿದೆಯೆಂದು ಅವರು ಪ್ರತಿಪಾದಿಸಿದ್ದಾರೆ.
ಕಿಂಗ್‌ಫಿಶರ್ ಏರ್‌ಲೈನ್ಸ್‌ನ ನಿಧಿ ವರ್ಗಾವಣೆ, ಆಸ್ತಿ ಖರೀದಿ ಇತ್ಯಾದಿ ಅಸಂಬದ್ದ ಆರೋಪಗಳಲ್ಲಿ ತಾನು ಸ್ವಲ್ಪವೂ ಅಪರಾಧಿಯಲ್ಲ. ನರೇಂದ್ರ ಮೋದಿ ಸರಕಾರಕ್ಕೆ ಲೋಕಸಭೆಯಲ್ಲಿ ಭಾ ರೀ ಬಹುಮತವಿರುವುದು ತನಗೆ ತೀರಾ ಸಂತೋಷವನ್ನು ಉಂಟು ಮಾಡಿದೆ. ರಾಜ್ಯಸಭೆಯಲ್ಲಿಯೂ ಬಹುಮತ ಬಂದರೆ ತನಗೆ ಇನ್ನಷ್ಟು ಸಂತೋಷವಾಗುತ್ತದೆ. ವೃತ್ತಿಪರ ಬ್ಯಾಂಕರ್‌ಗಳಾಗಿ ಅವರು ಸಾಲ ಮರುಪಾವತಿಸಲು ಹಾಗೂ ಮುಂದು ವರಿಯಲು ಬಯಸುತ್ತಿದ್ದಾರೆ. ಆದರೆ, ತನ್ನ ವ್ಯಕ್ತಿತ್ವವನ್ನು ಬಿಂಬಿಸಿರುವ ವಿಧಾನದಿಂದಾಗಿ ಅವರು ತನಗೆ ಯಾವುದೇ ರಿಯಾಯಿತಿ ನೀಡಲು ಆಸಕ್ತಿ ಹೊಂದಿಲ್ಲ. ಇದು ಭಾರತದಲ್ಲಿ ಮಾಧ್ಯಮಗಳಿಂದ ಭಾರೀ ಟೀಕೆಗೆ ಹಾಗೂ ಕಣ್ಗಾವಲು ಸಂಸ್ಥೆಗಳಿಂದ ತನಿಖೆಗಳಿಗೆ ಕಾರಣವಾಗಲಿದೆಯೆಂದು ಮಲ್ಯ ಸಂದರ್ಶನದಲ್ಲಿ ಹೇಳಿದ್ದಾರೆ.







