IIT -JEE ಪಾಸಾಗಿ ಆತ್ಮಹತ್ಯೆ ಮಾಡಿಕೊಂಡ ಕೃತಿ, ಡೆತ್ ನೋಟಲ್ಲಿ ತನ್ನ ಹೆತ್ತವರಿಗೆ ಬರೆದದ್ದೇನು ಗೊತ್ತೇ ?

ಕೋಟಾ, ಎ. 30 : ಐಐಟಿ-ಜೆಇಇ ಪರೀಕ್ಷೆಯನ್ನು ಅತ್ಯಧಿಕ ಅಂಕಗಳನ್ನು ಪಡೆದು ಪಾಸಾಗಿದ್ದರೂ ತನ್ನ ಹೆತ್ತವರ ಇಚ್ಛೆಯಂತೆ ಇಂಜಿನಿಯರಿಂಗ್ ಮಾಡುವ ಮನಸ್ಸಿಲ್ಲದೆ ವಿಜ್ಞಾನ ಪದವೀಧರೆಯಾಗಬೇಕೆಂಬ ಕನಸು ಹೊತ್ತಿದ್ದ 17 ವರ್ಷದ ಕೃತಿ ಗುರುವಾರ ಬಹು ಮಹಡಿ ಕಟ್ಟಡವೊಂದರಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಅಂದ ಹಾಗೆ ಈ ವಿದ್ಯಾರ್ಥಿನಿ ತನ್ನ ಹೆತ್ತವರಿಗೆ ಬರೆದಿರುವ 5 ಪುಟಗಳ ಡೆತ್ ನೋಟಲ್ಲಿ ಏನು ಬರೆದಿದ್ದಾಳೆಂದು ಗೊತ್ತೇ? ಅದರಲ್ಲಿ ಹೆತ್ತವರ ಇಚ್ಛೆಗೆ ತಕ್ಕ ಹಾಗೆ ತನಗೆ ನಡೆದುಕೊಳ್ಳಲು ಸಾಧ್ಯವಾಗಿಲ್ಲವೆಂಬ ತಳಮಳ, ಆಕೆಯ ಕಿರಿಯ ಸಹೋದರಿಯ ಭವಿಷ್ಯದ ಬಗ್ಗೆ ಕಾಳಜಿ ಹಾಗೂ ತಾನು ಆತ್ಮಹತ್ಯೆಯ ನಿರ್ಧಾರ ಕೈಗೊಂಡಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದಳು.
ಕೃತಿಗೆ ಇಂಜಿನಿಯರಿಂಗ್ ಮಾಡುವ ಮನಸ್ಸಿಲ್ಲವೆಂದು ಗೊತ್ತಿದ್ದೂ ಆಕೆ ಆ ವಿಷಯವನ್ನೇ ಕಲಿಯಬೇಕೆಂದು ಬಲವಂತಪಡಿಸಿದ್ದ ಹೆತ್ತವರಿಗೆ ಬರೆದ ಪತ್ರದಲ್ಲಿ ಪ್ರಸಕ್ತ 11ನೇ ತರಗತಿಯಲ್ಲಿ ಕಲಿಯುತ್ತಿರುವ ಆಕೆಯ ಕಿರಿಯ ಸಹೋದರಿಯನ್ನು ಆಕೆಗೆ ಇಷ್ಟವಾದ ವಿಷಯದಲ್ಲೇ ಶಿಕ್ಷಣ ಒದಗಿಸುವಂತೆ ಮನವಿ ಮಾಡಿದ್ದಾಳೆ.
ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಸಹೋದರಿಗೆ ತಿಳಿಸಿರುವ ಕೃತಿ ‘‘ನಾನು ನಿನ್ನನ್ನು ನನ್ನ ಕಿರಿಯ ಸಹೋದರಿಯಂತಲ್ಲ, ಬದಲಾಗಿ ನನ್ನ ಮಗಳಂತೆಯೇ ಪ್ರೀತಿಸುತ್ತೇನೆ,’’ಎಂದು ಬರೆದಿದ್ದಾಳೆಂದು ಕೋಟಾ ಎಸ್ಪಿಎಸ್ ಎಸ್ ಗೊದಾರ ತಿಳಿಸಿದ್ದಾರೆ.
ಕುಟುಂಬವನ್ನು ಚೆನ್ನಾಗಿ ಸಲಹುವಂತೆ ತಾಯಿಗೆ ತನ್ನ ಪತ್ರದಲ್ಲಿ ಹೇಳಿದ ಕೃತಿ ಅವರೆಲ್ಲರ ನಿರೀಕ್ಷೆಗಳನ್ನು ಹುಸಿಯಾಗಿಸಿದ್ದಕ್ಕೆ ಕ್ಷಮೆ ಯಾಚಿಸಿದ್ದಾಳೆ.
ಪತ್ರದಲ್ಲಿರುವ ಕೆಲವೊಂದು ಅಂಶಗಳನ್ನು ಎಸ್ಪಿ ಸುದ್ದಿಗಾರರಿಗೆ ತಿಳಿಸಿದರಾದರೂ, ಪ್ರಕರಣ ತನಿಖೆಯಲ್ಲಿರುವುದರಿಂದ ಪತ್ರವನ್ನು ಪತ್ರಕರ್ತರ ಮುಂದೆ ಪ್ರಸ್ತುತ ಪಡಿಸಿಲ್ಲ.
ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗಾಗಿ ಸಾಕಷ್ಟು ಕೋಚಿಂಗ್ ಸೆಂಟರುಗಳು ಕೋಟಾ ನಗರದಲ್ಲಿರುವುದರಿಂದ ಗಜಿಯಾಬಾದ್ ಮೂಲದ ಕೃತಿ ಕುಟುಂಬ ಎರಡು ವರ್ಷಗಳ ಹಿಂದೆ ಕೋಟಾದ ಇಂದಿರಾ ವಿಹಾರ್ ಪ್ರದೇಶದಲ್ಲಿ ಅಪಾರ್ಟ್ ಮೆಂಟ್ ಒಂದನ್ನು ಬಾಡಿಗೆಗೆ ಪಡೆದು ಅಲ್ಲಿ ವಾಸಿಸುತ್ತಿತ್ತು.
ಕೃತಿಯ ತಂದೆ ಟ್ರಾವೆಲ್ ಏಜನ್ಸಿಯೊಂದನ್ನು ನಡೆಸುತ್ತಿದ್ದು ಆಗಾಗ ಕೋಟಾಗೆ ಬಂದು ಹೋಗುತ್ತಿದ್ದರು. ಕೃತಿಯ ತಾಯಿ ಕೋಟಾದಲ್ಲಿ ಮಕ್ಕಳೊಂದಿಗೆ ವಾಸವಾಗಿದ್ದರು.







