ಎಳತ್ತೂರು ಫ್ರೆಂಡ್ಸ್ ಕ್ಲಬ್ ನ ಐದನೆ ವಾರ್ಷಿಕೋತ್ಸವ

ಕಿನ್ನಿಗೋಳಿ, ಎ.30: ಎಳತ್ತೂರು ಫ್ರೆಂಡ್ಸ್ ಕ್ಲಬ್ ನ ಐದನೆ ವಾರ್ಷಿಕೋತ್ಸವ ಸಮಾರಂಭವು ಎಳತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ವೇದಿಕೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಶಾಂತಿನಗರ ಖಿಲ್ರಿಯಾ ಜುಮಾ ಮಸೀದಿ ಮಾಜಿ ಖತೀಬ್ ಪಿ.ಜೆ.ಅಹ್ಮದ್ ಮದನಿ, ಮನುಷ್ಯತ್ವಕ್ಕಿಂತ ಮಿಗಿಲಾದ ಧರ್ಮ ಯಾವುದೂ ಇಲ್ಲ. ಪ್ರತಿಯೊಂದು ಧರ್ಮವು ಕೂಡಿ ಬಾಳುವುದನ್ನು ತಿಳಿಸಿಕೊಡುತ್ತದೆ. ಕೋಮುವಾದವು ಮನುಷ್ಯನನ್ನು ವಿನಾಶದೆಡೆಗೆ ಒಯ್ಯುತ್ತದೆ ಎಂದರು.
ಇದೇ ವೇಳೆ ಮಹಾಲಿಂಗೇಶ್ವರ ದೇವಳದ ನಿಕಟಪೂರ್ವ ಅರ್ಚಕರಾದ ವೇದಮೂರ್ತಿ ಟಿ.ನರಸಿಂಹ ಭಟ್ ಹಾಗೂ ಹಿರಿಯ ರಂಗಭೂಮಿ ಕಲಾವಿದ ಪುಷ್ಪರಾಜ್ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. ಹಾಗೂ ಜಿ.ಪಂ. ಮತ್ತು ತಾ.ಪಂ. ನೂತನ ಸದಸ್ಯರಾಗಿ ಆಯ್ಕೆಯಾದ ವಿನೋದ್ ಬೊಳ್ಳೂರು, ದಿವಾಕರ ಕರ್ಕೇರ ಮತ್ತು ಶರತ್ ಕುಬೆವೂರು ಇವರನ್ನು ಸಂಘದ ವತಿಯಿಂದ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪೊಂಪೈ ಕಾಲೇಜು ಪ್ರಾಂಶುಪಾಲ ಡಾ.ಜೋನ್ ಕ್ಲಾರೆನ್ಸ್ ಮಿರಾಂದ, ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ, ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ, ಪ್ರಕಾಶ್ ಹೆಗ್ಡೆ, ಉದಯ್ ಶೆಟ್ಟಿ, ಧನಪಾಲ ಶೆಟ್ಟಿ, ಶಶಿಧರ್ ಶೆಟ್ಟಿ, ಶ್ಯಾಂ ಸುಂದರ್ ಶೆಟ್ಟಿ ಉಪಸ್ಥಿತರಿದ್ದರು.





