ನೆರವಿಗೆ ನಿಂತ ಗುತ್ತಿಗೆದಾರರು, ಜೆಸಿಬಿ ಮಾಲೀಕರು, ಜನಪ್ರತಿನಿಧಿಗಳು
ಜಲಾಶಯ ಹೂಳೆತ್ತುವ ಕುರಿತು ವಿಶೇಷ ಸಭೆ

ಮುಂಡಗೋಡ, ಎ. 30: ಜಿಲ್ಲಾಧಿಕಾರಿಗಳು, ಸಚಿವರು ಹಾಗೂ ಶಾಸಕರ ಸಲಹೆಯ ಮೇರೆಗೆ ಮುಂಡಗೋಡ ತಾಲೂಕಾ ಪಂಚಾಯತ್ ಸಭಾ ಭವನದಲ್ಲಿ ಉಪ ವಿಭಾಗಾಧಿಕಾರಿ ಡಾ॥ ನರೇಂದ್ರ ಹೊನ್ನಳ್ಳಿ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ನಡೆಯಿತು.
ಕಳೆದ ಗುರುವಾರ ಜಿಲ್ಲಾಧಿಕಾರಿ ತಾಲೂಕಿನ ಜಲಾಶಯಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಕೆರೆಗಳ ಹಾಗೂ ಜಲಾಶಯಗಳ ಹೂಳೆತ್ತುವಂತೆ ಆದೇಶಿಸಿದ್ದರು. ಈ ಕೆಲಸಕ್ಕೆ ಯಾವುದೇ ಅನುದಾನ ಇಲ್ಲವಾದರೆ ಸರ್ಕಾರಿ ನೌಕರರ ಒಂದು ದಿನದ ವೇತನದಲ್ಲಿ ಈ ಕಾಮಗಾರಿ ಮಾಡಿಸುತ್ತೇವೆ ಎಂದರಲ್ಲದೇ, ಶ್ರೀಮಂತ ಗುತ್ತಿಗೆದಾರರು, ಜೆಸಿಬಿ ಮಾಲೀಕರು, ಜನಪ್ರತಿನಿಧಿಗಳು ಹಾಗೂ ರೈತರು ಸ್ವಯಂಪ್ರೇರಿತರಾಗಿ ಜಲಾಶಯಗಳ ಹೂಳೆತ್ತುವ ಕೆಲಸಕ್ಕೆ ಸಹಾಯ ಮಾಡುವಂತೆ ಕೋರಿದರು. ಈ ಕೆಲಸವನ್ನು ಯಶಸ್ವಿಯನ್ನಾಗಿಸಿ ಬೇರೆ ತಾಲೂಕುಗಳಿಗೆ ಹಾಗೂ ಜಿಲ್ಲೆಗಳಿಗೆ ಮಾದರಿಯಾಗಬೇಕು ಎಂದರು. ಬೇರೆ ತಾಲೂಕುಗಳಿಗೆ ಹೋಲಿಸಿದರೆ, ಮುಂಡಗೋಡ ತಾಲೂಕಿನಲ್ಲಿ ಅತಿ ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ.
ಈಗಾಗಲೇ ಕುಡಿಯುವ ನೀರಿಗಾಗಿ 1ಕೋಟಿ 29ಲಕ್ಷ ರೂಗಳನ್ನು ಜಿಲ್ಲಾ ಪಂಚಾಯತಕ್ಕೆ ಒದಗಿಸಿದ್ದು, 90 ಕಾಮಗಾರಿಗಳು ಸಂಪೂರ್ಣವಾಗಿ ಮುಗಿದಿದ್ದು, ಇನ್ನು 39 ಕಾಮಗಾರಿಗಳು ಪ್ರಗತಿಯಲ್ಲಿವೆ. 7 ದಿನಗಳಲ್ಲಿ ಈ ಕೆಲಸ ಮುಗಿಸುತ್ತೇವೆ ಎಂದು ಹೇಳಿದ್ದರೂ ಈವರೆಗೂ ಈ ಕೆಲಸಗಳನ್ನು ಏಕೆ ಮುಗಿಸಿಲ್ಲ? ಎಂದು ಜಿ.ಪಂ. ಅಧಿಕಾರಿಗಳಿಗೆ ಗುಡುಗಿದರು.
ರಸ್ತೆ ಅಗಲೀಕರಣ ಸಂದರ್ಭದಲ್ಲಿ ಸಾರ್ವಜನಿಕರು ಯಾವುದೇ ಕಿರಿಕಿರಿ, ತಂಟೆ-ತಕರಾರು ಇಲ್ಲದೇ ಸ್ಪಂದಿಸಿ ಪಟ್ಟಣವನ್ನು ಸುಂದರವನ್ನಾಗಿಸಲು ಸಹಕಾರ ನೀಡಿದ್ದೀರಿ. ಅದೇ ರೀತಿ ಜಲಾಶಯಗಳ ಹೂಳೆತ್ತುವ ಕೆಲಸದಲ್ಲಿಯೂ ಸಹಕರಿಸಿ ಎಂದು ಮನವಿ ಮಾಡಿದರು. ಸರ್ಕಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಒಂದು ಕಡೆ ಸೇರಿ ಒಳ್ಳೆಯ ಕೆಲಸ ಮಾಡುವಲ್ಲಿ ಯಶಸ್ವಿಯಾಗೋಣ. ನಾಳೆಯಿಂದಲೇ ಸನವಳ್ಳಿ ಹಾಗೂ ಬಾಚಣಕಿ ಜಲಾಶಯಗಳ ಹೂಳೆತ್ತುವ ಕೆಲಸ ಆರಂಭಿಸೋಣ ಎಂದರು. ಇದಕ್ಕೆ ಸ್ಪಂದಿಸಿದ ಜನಪ್ರತಿನಿಧಿಗಳು, ಜೆಸಿಬಿ ಮಾಲೀಕರು ಹಾಗೂ ಗುತ್ತಿಗೆದಾರರು ಈ ಕೆಲಸಕ್ಕೆ 26 ದಿನಗಳ ಕಾಲ ಉಚಿತವಾಗಿ ಜೆಸಿಬಿ ಒದಗಿಸುವುದಾಗಿ ಭರವಸೆ ನೀಡಿದರು. ಅಂದಾಜು 70-80 ಟ್ರ್ಯಾಕ್ಟರ್‌ಗಳನ್ನು ಈ ಕೆಲಸಕ್ಕೆ ಉಚಿತವಾಗಿ ನೀಡುವುದಲ್ಲದೇ, ಹೂಳೆತ್ತಿದ ಮಣ್ಣನ್ನು ತೋಟಗದ್ದೆಗಳಿಗೆ ಹಾಕುವುದಾಗಿ ಹೇಳಿದರು.
ಪಶುಸಂಗೋಪನಾ ಇಲಾಖೆಯಿಂದ ಜಾನುವಾರುಗಳ ಮೇವಿಗಾಗಿ ಫುಡ್ ಕಿಟ್ ನೀಡಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಅವರು ತಿಳಿಸಿದರು.
ಸನವಳ್ಳಿ ಗ್ರಾಮಸ್ಥರು ಮಾತನಾಡಿ ನಮ್ಮ ಊರಿನಲ್ಲಿ ನೀರಿನ ಗುಣಮಟ್ಟ ಸರಿ ಇಲ್ಲ. ಈ ನೀರು ಕುಡಿದು ಗ್ರಾಮದ ಚಿಕ್ಕಮಕ್ಕಳು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಆದ ಕಾರಣ ಸನವಳ್ಳಿ ಜಲಾಶಯದಿಂದ ಪೈಪ್‌ಲೈನ್ ಅಳವಡಿಸಿ, ನಮ್ಮ ಗ್ರಾಮಕ್ಕೆ ಕುಡಿಯುವ ನೀರು ಒದಗಿಸಿ ಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಪವಿಭಾಗಾಧಿಕಾರಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ 5 ತಿಂಗಳ ಹಿಂದೆಯೇ ಪ್ರಸ್ತಾವನೆ ಕಳುಹಿಸಲಾಗಿದೆ. ಇಲ್ಲಿಯವರೆಗೆ ಯಾವುದೇ ಉತ್ತರ ಬಂದಿಲ್ಲ. ಮುಂದಿನ ದಿನಗಳಲ್ಲಿ ಈ ಕೆಲಸ ಮಾಡಿಕೊಡುವುದಾಗಿ ಉತ್ತರಿಸಿದರು.
ಜಿ.ಪಂ. ಸದಸ್ಯ ಎಲ್.ಟಿ.ಪಾಟೀಲ ಮಾತನಾಡಿ ಸರ್ಕಾರದ ಅನುದಾನವನ್ನೇ ನಂಬಿಕೊಂಡು ಕುಳಿತರೆ ಯಾವ ಕೆಲಸವೂ ಆಗುವುದಿಲ್ಲ. ಸಮಸ್ಯೆ ಬಗೆಹರಿಸಲು ಸಾಧ್ಯವಾಗುವುದಿಲ್ಲ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ತಾಲೂಕಿನಲ್ಲಿ ಪ್ರಗತಿ ಕಾಣುತ್ತಿಲ್ಲ. ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಯೋಜನೆಯನ್ನು ಬಳಸಿಕೊಳ್ಳಲಾಗುತ್ತಿಲ್ಲ. ತಾಲೂಕಿನ ಎಲ್ಲ ಕೆರೆಗಳು, ಜಲಾಶಯಗಳು ನೀರಿಲ್ಲದೇ ಬತ್ತಿಹೋಗಿವೆ. ಈಗಲೇ ಕೆಲಸ ಮಾಡುವ ಅವಕಾಶವಿದೆ. ನಾಳೆಯೇ ತಾ.ಪಂ. ಕಾರ್ಯನಿರ್ವಹಣಾಧಿಕಾರಿ, ಪಿಡಿಓಗಳ ಸಭೆ ನಡೆಸಿ ಹೂಳೆತ್ತುವ ಕೆಲಸ ಮಾಡಿಸೋಣ ಎಂದರು.
ಜಲಾಶಯಗಳ ಹೂಳೆತ್ತಲು 26 ದಿನಗಳ ಕಾಲ ಉಚಿತ ಜೆಸಿಬಿ, 80 ಟ್ರ್ಯಾಕ್ಟರ್‌ಗಳನ್ನು ಉಚಿತವಾಗಿ ನೀಡುತ್ತೇವೆ. ಹೂಳೆತ್ತಿದ ಮಣ್ಣನ್ನು ಸ್ವಂತ ಖರ್ಚಿನಲ್ಲಿ ತೋಟಗದ್ದೆಗಳಿಗೆ ಸಾಗಿಸಲು ನೆರವಾಗುತ್ತೇವೆ.
-ಗುತ್ತಿಗೆದಾರರು, ಜೆಸಿಬಿ ಮಾಲೀಕರು ಹಾಗೂ ಜನಪ್ರತಿನಿಧಿಗಳು







