ಪರಿಶಿಷ್ಟರಿಗೆ ಕಾಂಗ್ರೆಸ್‌ನಿಂದ ಅನ್ಯಾಯ: ದಲಿತ ಸಂಘಟನೆಗಳ ಒಕ್ಕೂಟ
ಮುಂಡಗೋಡ, ಎ. 30: ಪರಿಶಿಷ್ಟ ಮಹಿಳೆಗೆ ಮೀಸಲಿರುವ ಜಿ.ಪಂ. ಅಧ್ಯಕ್ಷ ಸ್ಥಾನವನ್ನು ಪ್ರವರ್ಗ1ರಲ್ಲಿ ಬರುವ ಮೊಗೇರ ಜನಾಂಗಕ್ಕೆ ನೀಡಿ ಕಾಂಗ್ರೆಸ್ ನೈಜ ಪರಿಶಿಷ್ಟ ಜನಾಂಗಕ್ಕೆ ಅನ್ಯಾಯ ಮಾಡಿದೆ ಎಂದು ದಲಿತ ಸಂಘಟನೆಗಳ ಒಕ್ಕೂಟ ಆರೋಪಿಸಿದೆ.
ಇಂದು ಪತ್ರಿಕಾಗೋಷ್ಠಿ ನಡೆಸಿದ ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಕಾಂಗ್ರೆಸ್ ಪಕ್ಷದ ಶಾಸಕರು, ಮಂತ್ರಿಗಳು ಹಾಗೂ ಮುಖಂಡರುಗಳ ನಿರ್ಧಾರವನ್ನು ಖಂಡಿಸಿದ್ದಾರೆ.
ಕಾಂಗ್ರೆಸ್ ಪಕ್ಷ ದಲಿತರ ಮತಗಳನ್ನು ಪಡೆದು, ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೆ ಅಧಿಕಾರ ಅನುಭವಿಸುತ್ತಾ ಬಂದಿದೆ. ದಲಿತರ ಮೇಲೆ ದೌರ್ಜನ್ಯ ನಡೆಸಿ, ಪರಿಶಿಷ್ಟರಿಗೆ ಮೀಸಲಾದ ಸೌಲಭ್ಯವನ್ನು ಪರಿಶಿಷ್ಟರಲ್ಲದವರಿಗೆ ನೀಡಿ, ನಮ್ಮನ್ನು ಹೀನಾಯವಾಗಿ ನಡೆಸಿಕೊಂಡ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವ ಕಾಲ ಕೂಡಿ ಬಂದಿದೆ. ಜಿಲ್ಲೆಯ ಪ್ರತಿಯೊಬ್ಬ ದಲಿತ ಮತದಾರರು ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಮತ ಹಾಕುವಾಗ ಬಹಳ ವಿಚಾರ ಮಾಡಬೇಕು ಎಂದು ಕರೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ದ.ಸಂ.ಸ ಜಿಲ್ಲಾ ಸಂಚಾಲಕ ಎಸ್. ಫಕ್ಕೀರಪ್ಪ, ಭೋವಿವಡ್ಡರ ಕ್ಷೇಮಾಭಿವೃದ್ಧಿ ಸಂಘದ ಹುಲಗಪ್ಪ ಭೋವಿವಡ್ಡರ, ಚಲವಾದಿ ಸೇವಾಸಂಸ್ಥೆಯ ಬಿ.ಎಂ.ಮಡ್ಲಿ, ಮಾದಿಗರ ಸೇವಾ ಸಂಘದ ರಾಘವೇಂದ್ರ ಹರಿಜನ ಹಾಜರಿದ್ದರು.





