ಗೂಗಲ್ ಯಾಕೆ, ನಮ್ಮ ದೇಸೀ ಪ್ರತಿಭೆಗಳಿಂದಲೇ ಚಾಲಕ ರಹಿತ ವಾಹನ !

ಕೊಲ್ಕತ್ತಾ : ಗೂಗಲ್ ಮಾತ್ರ ಸ್ವಯಂಚಾಲಿತ ವಾಹನ ಸಿದ್ಧಪಡಿಸುವುದೇನು? ನಮ್ಮ ದೇಸೀ ಪ್ರತಿಭೆಗಳು ತಾವು ಅದಕ್ಕಿಂತ ಏನೂ ಕಡಿಮೆಯಿಲ್ಲವೆಂದು ಸಾಬೀತು ಪಡಿಸಿದ್ದಾರೆ.
ಕ್ಯಾಂಪಸ್ಸಿನೊಳಗೆ ಅತ್ತಿತ್ತ ತಿರುಗಾಡಲು ಅನುಕೂಲವಾಗುವ ಸ್ವಯಂಚಾಲಿತ ವಾಹನಗಳನ್ನು ಐಐಟಿ ಖರಗ್ ಪುರದ ರೋಬೋಟಿಕ್ಸ್ ರಿಸರ್ಚ್ ಗ್ರೂಪ್ ಇದರ ಮಾಜಿ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದುಈ ವಾಹನಗಳ ನಿರ್ವಹಣಾ ವೆಚ್ಚ 40ರಿಂದ 60% ಕಡಿಮೆಯಾಗುವುದು ಎಂದು ಸಂಸ್ಥೆ ಹೇಳಿಕೊಂಡಿದೆ.
ಈ ವಿದ್ಯುತ್ ಚಾಲಿತ ವಾಹನ- ಔರೋ ಶಟಲ್ಸ್ - ನಳಿನ್ ಗುಪ್ತ, ಜಿತ್ ರೇ ಚೌಧುರಿ ಹಾಗೂ ಶ್ರೀನಿವಾಸ್ ರೆಡ್ಡಿ ಸಹಿತ ಹಲವು ವಿದ್ಯಾರ್ಥಿಗಳು ಸಿದ್ಧಪಡಿಸಿದ್ದು, ವಾಹನ ದಟ್ಟಣೆಯ ರಸ್ತೆಗಳಲ್ಲಿ ಸುರಕ್ಷಿತವಾಗಿ ಪ್ರಯಾಣಿಸಬಹುದಾಗಿದೆ.
ಈ ವಾಹನವನ್ನು ಎಲ್ಲಾ ಹವಾಮಾನದ ಪರಿಸ್ಥಿತಿಯಲ್ಲೂ ದಿನದ 24 ಗಂಟೆಯೂ ಉಪಯೋಗಿಸಬಹುದಾಗಿದೆಯಲ್ಲದೆ ಅದಕ್ಕೆಂದೇ ವಿಶೇಷ ಟ್ರ್ಯಾಕ್ ಅಥವಾ ರಸ್ತೆ ಬೇಕಾಗಿಲ್ಲವಾಗಿದೆ. ವಾಹನದಲ್ಲಿ ಲೇಸರ್, ಕ್ಯಾಮರರಾ, ರಾಡರ್ ಹಾಗೂ ಜಿಪಿಎಸ್ ಅಳವಡಿಸಲಾಗಿದೆಯಲ್ಲದೆ ಅದು ಚಲಿಸುವಂತಹ ಪ್ರದೇಶದ 3ಡಿ ನಕ್ಷೆಯ ಆಧಾರದಲ್ಲಿ ಅದು ತನ್ನ ಪ್ರಯಾಣ ಮುಂದುವರಿಸುತ್ತದೆ.
ವಾಹನದಲ್ಲಿರುವ ಟಚ್ ಸ್ಕ್ರೀನ್ ಮುಖಾಂತರ ಪ್ರಯಾಣಿಕರು ತಾವು ಚಲಿಸಬೇಕಾದ ಮಾರ್ಗವನ್ನು ಅಥವಾ ತಮ್ಮ ಮೊಬೈಲ್ ಆ್ಯಪ್ ಮುಖಾಂತರ ರಸ್ತೆಯನ್ನು ಗುರುತಿಸಬಹುದು.
ವಾಹನದಲ್ಲಿರುವ ಸಾಫ್ಟ್ ವೇರ್ ಸುರಕ್ಷಿತವಾಗಿ ಪ್ರಯಾಣಿಸುವ ರಸ್ತೆಯನ್ನು ಗುರುತಿಸಿ ಅಂತೆಯೇಸಂಚರಿಸುವುದು.
ವಾಹನವು ಯಾವುದೇ ತೊಡಕನ್ನು ಗುರುತಿಸುವ ಹಾಗೂ ಢಿಕ್ಕಿಯನ್ನು ತಡೆಯುವ ವ್ಯವಸ್ಥೆ ಹೊಂದಿದ್ದು, ಪಾದಚಾರಿಗಳನ್ನು ಗುರುತಿಸಿ ಅವರಿಗೆ ಯಾವುದೇ ಹಾನಿಯಾಗದಂತೆ ಸಂಚರಿಸುವುದಲ್ಲದೆ ಅದಕ್ಕೆ ಎಮರ್ಜೆನ್ಸಿ ಬ್ರೇಕಿಂಗ್ ವ್ಯವಸ್ಥೆ, ವೇಗ ನಿಯಂತ್ರಕಗಳಿದ್ದು, ಟ್ರಾಫಿಕ್ ಸಿಗ್ನಲ್ ಗುರುತಿಸುವಿಕೆಯ ವ್ಯವಸ್ಥೆಯೂ ಇದೆ.





