33 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಹಾರ ಭದ್ರತಾ ಕಾಯ್ದೆ ಜಾರಿ:ಸರಕಾರ

ಹೊಸದಿಲ್ಲಿ,ಎ.30: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅನುಷ್ಠಾನದಲ್ಲಿ ವಿಳಂಬಕ್ಕಾಗಿ ಮಹಾ ಲೆಕ್ಕ ಪರಿಶೋಧಕ(ಡಿಎಜಿ)ರಿಂದ ಟೀಕೆಗೊಳಗಾಗಿರುವ ಸರಕಾರವು, 33 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾಯ್ದೆಯನ್ನು ಜಾರಿಗೊಳಿಸಲಾಗಿದ್ದು, 72.5 ಕೋಟಿ ಫಲಾನುಭವಿಗಳಿಗೆ ಸಬ್ಸಿಡಿ ದರಗಳಲ್ಲಿ ಆಹಾರ ಧಾನ್ಯಗಳನ್ನು ಪೂರೈಸಲಾಗುತ್ತಿದೆ ಎಂದು ತಿಳಿಸಿದೆ.
ಕಾಯ್ದೆಯ ಅನುಷ್ಠಾನಕ್ಕಾಗಿ 18 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸನ್ನದ್ಧತೆಯ ವೌಲ್ಯಮಾಪನವನ್ನು ನಡೆಸಿರುವ ಸಿಎಜಿ ತನ್ನ ಆಡಿಟ್ ವರದಿಯನ್ನು ಶನಿವಾರ ಬಿಡುಗಡೆಗೊಳಿಸಿದೆ. ಆಹಾರ ಭದ್ರತಾ ಕಾಯ್ದೆಯ ಅನುಷ್ಠಾನದಲ್ಲಿ ವಿಳಂಬ ಮತ್ತು ಸಂಸತ್ತಿನ ಒಪ್ಪಿಗೆಯಿಲ್ಲದೆ ಮೂರು ಬಾರಿ ಜಾರಿಯ ಮುಂದೂಡಿಕೆಗಾಗಿ ಅದು ಕೇಂದ್ರವನ್ನು ದೂರಿದೆ.
ಎ.1ಕ್ಕೆ ಇದ್ದಂತೆ 33 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸಿದ್ದು, 72.5 ಕೋ.ಫಲಾನುಭವಿಗಳಿಗೆ(ಸುಮಾರು 14.8 ಕೋ.ಕುಟುಂಬಗಳು) ಸಬ್ಸಿಡಿ ದರಗಳಲ್ಲಿ ಆಹಾರ ಧಾನ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಆಹಾರ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ. ಉಳಿದ ರಾಜ್ಯಗಳಾದ ತಮಿಳುನಾಡು ಮತ್ತು ಕೇರಳಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಿದ್ದು, ಚುನಾವಣೆಗಳು ಮುಗಿದ ಬಳಿಕವೇ ಆಹಾರ ಭದ್ರತಾ ಕಾಯ್ದೆಯ ಜಾರಿಗೆ ನಿರ್ಧಾರವನ್ನು ಕೈಗೊಳ್ಳಲು ಸಾಧ್ಯ. ನಾಗಾಲ್ಯಾಂಡ್ 2016,ಜುಲೈನಲ್ಲಿ ಕಾಯ್ದೆಯನ್ನು ಜಾರಿಗೊಳಿಸುವ ನಿರೀಕ್ಷೆಯಿದೆ ಎಂದು ಅದು ಹೇಳಿದೆ. ನಿಯೋಜಿತ ಸಾರ್ವಜನಿಕ ವಿತರಣೆ ವ್ಯವಸ್ಥೆ(ಟಿಡಿಪಿಎಸ್)ಯ ಸುಧಾರಣೆಗೆ ಕೈಗೊಳ್ಳಲಾಗಿರುವ ಕ್ರಮಗಳನ್ನು ಪ್ರಮುಖವಾಗಿ ಬಿಂಬಿಸಿರುವ ಸಚಿವಾಲಯವು, ಎಲ್ಲ ರಾಜ್ಯಗಳಲ್ಲಿ ಪಡಿತರ ಚೀಟಿಗಳನ್ನು ಶೇ.100ರಷ್ಟು ಗಣಕೀಕರಿಸಲಾಗಿದೆ ಮತ್ತು ಪಿಡಿಎಸ್ ಪೋರ್ಟಲ್‌ಗಳಲ್ಲಿ ಅವುಗಳ ವಿವರಗಳನ್ನು ಲಭ್ಯವಾಗಿಸಲಾಗಿದೆ ಎಂದಿದೆ.







