ಮೋಸಗಾರರ ಬಗ್ಗೆ ಎಚ್ಚರವಿರಲಿ: ಎನ್.ಕೆ. ಚಾರಿ
ಬಿಜೈನಲ್ಲಿ ಎಸ್‌ಬಿಐನ ಇನ್‌ಟಚ್ ಶಾಖೆ ಉದ್ಘಾಟನೆ

ನಿಮ್ಮ ಎಟಿಎಂ ಕಾರ್ಡ್ ಬ್ಲಾಕ್ ಆಗಿದೆ. ಅದಕ್ಕಾಗಿ ನಿಮ್ಮ ಎಟಿಎಂ ನಂಬರ್ ಕೇಳಿಕೊಂಡು ಬ್ಯಾಂಕ್ ಹೆಸರಲ್ಲಿ ಬರುವ ಅನಾಮಧೇಯರ ಮೊಬೈಲ್ ಕರೆ, ಸಂದೇಶಗಳ ಬಗ್ಗೆ ಎಚ್ಚರವಹಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಕೆ. ಚಾರಿ ಗ್ರಾಹಕರಿಗೆ ತಿಳಿಸಿದ್ದಾರೆ.
ಬಿಜೈನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಂಗಳೂರಿನ ಪ್ರಥಮ ಇನ್ ಟಚ್ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬ್ಯಾಂಕ್ನ ಸಿಬ್ಬಂದಿ ಕರೆ ಅಥವಾ ಸಂದೇಶದ ಮೂಲಕ ಗ್ರಾಹಕರ ಎಟಿಎಂ ಪಿನ್ ಅಥವಾ ಪಾಸ್ವರ್ಡ್ ಕೇಳುವುದಿಲ್ಲ. ಹಾಗಾಗಿ ಅಂತಹ ಕರೆಗಳು ಬಂದಾಗ ಅದಕ್ಕೆ ಪ್ರತಿಕ್ರಿಯೆ ನೀಡದೆ, ತಮ್ಮ ಖಾತೆ ಬಗ್ಗೆ ಯಾವುದೇ ಅನುಮಾನವಿದ್ದಲ್ಲಿ ತಮ್ಮ ಶಾಖೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ಎಸ್ಬಿಐನ 118ನೆ ಇನ್ಟಚ್ ಶಾಖೆ ಇದಾಗಿದ್ದು, ಕರ್ನಾಟಕದ 8ನೆ ಶಾಖೆಯಾಗಿದೆ. ಇನ್ಟಚ್ ಶಾಖೆಯು, ಡಿಜಿಟಲ್ ಬ್ಯಾಂಕಿಂಗ್ಗೆ ಪೂರಕವಾಗಿದ್ದು, ದೇಶಾದ್ಯಂತ ಪ್ರಸಕ್ತ ಸಾಲಿನಲ್ಲಿ 250 ಹೊಸ ಶಾಖೆಗಳನ್ನು ತೆರೆಯುವ ಮೂಲಕ ಗ್ರಾಹಕರಿಗೆ ವಿನೂತನ ಅನುಭವವನ್ನು ನೀಡಲು ಬ್ಯಾಂಕ್ ಕ್ರಮ ಕೈಗೊಂಡಿದೆ ಎಂದರು.
ಬಿಜೈನ ನೂತನ ಶಾಖೆಯು ಸ್ವಯಂ, ಇಂಟರ್ನೆಟ್ ಬ್ಯಾಂಕಿಂಗ್ ಕಿಯಾಸ್ಕ್ಗಳು, ನಗದು ಪಡೆಯುವುದು ಹಾಗೂ ನಗದು ಠೇವಣಿ ವ್ಯವಸ್ಥೆಯ ಜತೆಗೆ ಪಾಸ್ಬುಕ್ ಎಂಟ್ರಿಯ ಡಿಜಿಟಲ್ ಯಂತ್ರಗಳನ್ನು ಹೊಂದಿದೆ. ಇದರಿಂದ ಗ್ರಾಹಕರ ಸಮಯ ಉಳಿತಾಯವಾಗುವುದಲ್ಲದೆ, ತಮ್ಮ ಅನುಕೂಲಕರ ಸಮಯದಲ್ಲಿ ಹಣ ಪಡೆಯುವುದು ಅಥವಾ ಠೇವಣಿ ಹೂಡಲು ಸಾಧ್ಯವಾಗಲಿದೆ ಎಂದು ಎನ್.ಕೆ. ಚಾರಿ ತಿಳಿಸಿದರು.
ಎಸ್ಬಿಐ ಪ್ರತಿ ವರ್ಷ ತನ್ನ ಬ್ಯಾಂಕಿಂಗ್‌ನ ಒಟ್ಟು ಲಾಭದ ಶೇ.1 ಭಾಗವನ್ನು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ನಿಧಿಯಾಗಿ ಬಳಸುತ್ತಿದ್ದು, ಕಳೆದ ವರ್ಷ 130 ಕೋಟಿ ರೂ.ಗಳನ್ನು ಈ ಉದ್ದೇಶಕ್ಕಾಗಿ ಬಳಕೆ ಮಾಡಿದೆ ಎಂದವರು ಹೇಳಿದರು
. ಈ ಸಂದರ್ಭ ಲೇಡಿಹಿಲ್ ಸಮೀಪದ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯ 15 ಮಂದಿ ವಿದ್ಯಾರ್ಥಿಗಳಿಗೆ ಸಿಎಸ್ಆರ್ ಕಾರ್ಯಕ್ರಮದಡಿ ಬ್ಯಾಗ್ ಹಾಗೂ ಪುಸ್ತಕಗಳನ್ನು ವಿತರಿಸಲಾಯಿತು
. ಕಾರ್ಯಕ್ರಮದಲ್ಲಿ ಬ್ಯಾಂಕ್ನ ಜನರಲ್ ಮ್ಯಾನೇಜರ್ ವೈ. ವಿಜಯ ಕುಮಾರ್, ರೀಜನಲ್ ಮ್ಯಾನೇಜರ್ ಗುಂಡೂರಾವ್, ಡಿಜಿಎಂ ಜಿ.ಪಿ. ರೇ ಉಪಸ್ಥಿತರಿದ್ದರು.









