ಕಿರುಗುಂದ ಗ್ರಾಪಂ ವ್ಯಾಪ್ತಿಯ ಐದು ಗ್ರಾಮಗಳ ದತ್ತು: ಬಿ.ಬಿ.ನಿಂಗಯ್ಯ ಭರವಸೆ

ಮೂಡಿಗೆರೆ,ಎ.30: ಕಿರುಗುಂದ ಗ್ರಾಪಂ ವ್ಯಾಪ್ತಿಯ ಐದು ಹಳ್ಳಿಗಳನ್ನು ದತ್ತು ಪಡೆದುಕೊಂಡು ಅಭಿವೃದ್ಧಿಪಡಿಸುವುದಾಗಿ ಶಾಸಕ ಬಿ.ಬಿ.ನಿಂಗಯ್ಯ ಭರವಸೆ ನೀಡಿದರು.
ಅವರು, ಶನಿವಾರ ಕಿರುಗುಂದ ಗ್ರಾಮದಲ್ಲಿ ನಡೆದ ಗ್ರಾಮ ವಿಕಾಸಯೋಜನೆಯ ಗ್ರಾಮಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಗ್ರಾಮ ವಿಕಾಸ ಯೋಜನೆಯಡಿ ಅಭಿವೃದ್ಧಿಪಡಿಸಲು ಉದುಸೆ ಗ್ರಾಮವನ್ನು ಆಯ್ಕೆ ಮಾಡಲಾಗಿದೆ. ಇದರ ಅಭಿವೃದ್ಧಿಗಾಗಿ 75 ಲಕ್ಷ ರೂ.ವನ್ನು ತಾವು ಮಂಜೂರು ಮಾಡಿಸಿದ್ದು, ಅದರಲ್ಲಿ ರಸ್ತೆ ಅಭಿವೃದ್ಧಿ ಸೇರಿದಂತೆ ಐದಾರು ಮೂಲಭೂತ ಸೌಕರ್ಯಗಳನ್ನು ಒದಗಿಸುವ ಅವಕಾಶಗಳಿವೆ. ಈ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಗ್ರಾಮದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ಉದುಸೆ ಗ್ರಾಮದ 2 ಕೆರೆಗಳ ಅಭಿವೃದ್ಧಿಗೆ ಈಗಾಗಲೇ 40 ಲಕ್ಷ ರೂ.ಮಂಜೂರಾಗಿದೆ. ಇನ್ನು 50 ಲಕ್ಷ ರೂ.ಅನುದಾನವನ್ನು ಹೆಗ್ಗರವಳ್ಳಿ, ಚಕ್ಕುಡಿಗೆ, ಕಿರುಗುಂದ ಮತ್ತು ಬೆಟ್ಟದಮನೆ ಗ್ರಾಮಗಳ ವಿವಿಧ ಕಾಮಗಾರಿಗಳಿಗೆ ಮಂಜೂರು ಮಾಡಿಸಲಾಗುವುದು. ಈ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆಯನ್ನು ಕಳಿಸಲಾಗಿದೆ. ಮುಂದಿನ ದಿನಗಳಲ್ಲಿ ಕಿರುಗುಂದ ಗ್ರಾಪಂ ವ್ಯಾಪ್ತಿಯ ಉದುಸೆ, ಹೆಗ್ಗರವಳ್ಳಿ, ಚಕ್ಕುಡಿಗೆ, ಕಿರುಗುಂದ ಮತ್ತು ಬೆಟ್ಟದಮನೆ ಸೇರಿದಂತೆ ಎಲ್ಲಾ ಐದು ಗ್ರಾಮಗಳನ್ನು ದತ್ತು ಪಡೆದುಕೊಂಡು ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದರು.
ಈ ವೇಳೆ ಗ್ರಾಪಂ ಅಧ್ಯಕ್ಷೆ ಎಚ್.ಡಿ.ಭಾಗ್ಯಾ, ಜಿಪಂ ಸದಸ್ಯೆ ಅಮಿತಾ ಮುತ್ತಪ್ಪ, ತಾಪಂ ಸದಸ್ಯೆ ಸವಿತಾ ರಮೇಶ್, ಪಿಡಿಒ ಸೋಮಶೇಖರ್ ಮತ್ತಿತರರ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.







