ಆಗಸ್ಟಾ ಪ್ರಕರಣದಲ್ಲಿ ಬಿಜೆಪಿಯಿಂದ ದ್ವೇಷ ರಾಜಕಾರಣ: ಕಾಂಗ್ರೆಸ್ ಪ್ರತಿಭಟನೆ

ಚಿಕ್ಕಮಗಳೂರು, ಎ.30: ಕೇಂದ್ರದಲ್ಲಿ ಎನ್‌ಡಿಎ ನೇತೃತ್ವದ ಬಿಜೆಪಿ ಸರಕಾರದ ಕೂಸು ಆಗಸ್ಟಾ ಹೆಲಿಕಾಪ್ಟರ್ ಪ್ರಕರಣವನ್ನು ಸೋನಿಯಾ ಹೆಗಲಿಗೆ ಹಾಕಲು ಹೊರಟಿರುವ ಮೋದಿ ನೇತೃತ್ವದ ಬಿಜೆಪಿ ಸರಕಾರದ ದ್ವೇಷ ರಾಜಕಾರಣವನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದು ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್.ವಿಜಯ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಅವರು ಶನಿವಾರ ಆಗಸ್ಟಾ ಹೆಲಿಕಾಪ್ಟರ್ ಪ್ರಕರಣವನ್ನು ಸೋನಿಯಾ ಗಾಂಧಿಯವರ ಹೆಗಲಿಗೆ ಕಟ್ಟಲು ಕೇಂದ್ರದ ಬಿಜೆಪಿ ಸರಕಾರ ಯತ್ನಿಸುತ್ತಿದೆ ಎಂದು ಆರೋಪಿಸಿ ನಗರದ ಹನುಮಂತಪ್ಪ ವೃತ್ತದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.
ಕಳೆದ ಯುಪಿಎ ಸರಕಾರವು ಈ ಹೆಲಿಕಾಪ್ಟರ್‌ಗಳು ಒಪ್ಪಂದದಂತೆ ಸಿಯಾಚಿನ್ ಪ್ರದೇಶದಲ್ಲಿ 18 ಸಾವಿರ ಅಡಿ ಹಾರುವ ಶಕ್ತಿ ಹೊಂದದೇ ಕೇವಲ 15 ಸಾವಿರ ಅಡಿ ಅಷ್ಟೇ ಹಾರುತ್ತವೆ ಎಂದು ಅವುಗಳನ್ನು ತಿರಸ್ಕರಿಸಿ ಈ ಒಪ್ಪಂದದಂತೆ ಸರಬರಾಜು ಮಾಡದ ಕಂಪೆನಿಯನ್ನು ಕಪ್ಪುಪಟ್ಟಿಗೆ ಸೇರಿಸುವ ತೀರ್ಮಾನ ಮಾಡಿತ್ತು. ಆದರೆ ಕಾಂಗ್ರೆಸ್‌ನವರು ಅದರಲ್ಲೂ ಪಕ್ಷದ ಅಧಿನಾಯಕಿ ಸೋನಿಯಾರವರು ಫಲಾನುಭವಿಯಾಗಿ ಭಾಗಿಯಾಗಿದ್ದಾರೆಂಬ ಬಿಜೆಪಿಯವರ ಆರೋಪದಲ್ಲಿ ಹುರುಳಿಲ್ಲವೆಂದು ಅಧ್ಯಕ್ಷರು ಟೀಕಿಸಿದರು.
ಪಕ್ಷದ ನಾಯಕಿ ಮಾಜಿ ಎಂಎಲ್ಸಿ ಗಾಯತ್ರಿ ಶಾಂತೇಗೌಡ ಮಾತನಾಡಿ, ದೇಶದಲ್ಲಿ ಸಮರ್ಥ ನಾಯಕಿ ಸೋನಿಯಾರವರ ಮೇಲಿನ ಆರೋಪಕ್ಕೆ ನಾವು ಜಗ್ಗುವುದಿಲ್ಲ. ಕಾಂಗ್ರೆಸ್ ಒಗ್ಗಟ್ಟಾಗಿ ತಮ್ಮ ನಾಯಕಿ ಹಿಂದೆ ಇರುತ್ತದೆಂದು ಬಿಜೆಪಿಗೆ ಸವಾಲು ಹಾಕಿದರು. ಪಕ್ಷದ ಮುಖಂಡ ಎಂ.ಎಲ್.ಮೂರ್ತಿ ಮಾತನಾಡಿದರು.
ಇದಕ್ಕೂ ಮುನ್ನ ಕಾಂಗ್ರೆಸ್ ಕಾರ್ಯಕರ್ತರು ನಗರದ ತಾಲೂಕು ಕಚೇರಿಯಿಂದ ಮೆರವಣಿಗೆ ಮೂಲಕ ತೆರಳಿ ಹನುಮಂತಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ಕೆ.ಎಸ್.ಶಾಂತೇಗೌಡ, ಎ.ಎನ್.ಮಹೇಶ್, ಕೆ.ಮುಹಮ್ಮದ್, ಕೆಂಪನಹಳ್ಳಿ ಮಂಜುನಾಥ್, ಬಿ.ಎಂ.ಸಂದೀಪ್, ಎಂ.ಸಿ.ಶಿವಾನಂದಸ್ವಾಮಿ, ಹಳ್ಳಿಹಿತ್ಲು ಮಹೇಶ್, ಸಿಡಿಎ ಅಧ್ಯಕ್ಷ ಡಿ.ಎಸ್.ಚಂದ್ರೇಗೌಡ, ಸದಸ್ಯ ಐ.ಕೆ.ಓಂಕಾರೇಗೌಡ, ನಗರಸಭಾ ಸದಸ್ಯರಾದ ಜಗದೀಶ್, ರೂಬಿನ್ ಮೋಸೆಸ್, ಪುಟ್ಟಸ್ವಾಮಿ, ಸಂದೇಶ್, ಕೆ.ಎಂ.ಕೃಷ್ಣಮೂರ್ತಿ, ಪರಿಶಿಷ್ಟ ವರ್ಗಗಳ ಅಧ್ಯಕ್ಷ ಮಲ್ಲೇಶ್ ಸ್ವಾಮಿ, ವಕೀಲರ ವಿಭಾಗದ ಅಧ್ಯಕ್ಷ ಸೋಮಶೇಖರ್, ಹನೀಫ್, ಆಡಿಟರ್ ಮನ್ಸೂರ್, ಸಾಂಬಾರು ಪದಾರ್ಥಗಳ ಮಂಡಳಿ ನಿರ್ದೇಶಕ ಪವನ್, ಶ್ರೀನಿವಾಸ್ ದೇವಾಂಗ, ಯಶೋದಾ, ವಾಣಿ ಮತ್ತಿತರರು ಉಪಸ್ಥಿತರಿದ್ದರು.







