ಸಂವಿಧಾನ ಶಿಲ್ಪಿ ಅಂಬೇಡ್ಕರ್ ವಿಶ್ವಮಾನ್ಯರು: ತಿಮ್ಮಣ್ಣ
ಮೂಡಿಗೆರೆ, ಎ.30: ವಿಶ್ವ ರತ್ನ, ಸಂವಿಧಾನ ಶಿಲ್ಪಿಡಾ. ಬಿ.ಆರ್.ಅಂಬೇಡ್ಕರ್‌ರವರು ವಿಶ್ವಮಾನ್ಯರಾಗಿದ್ದಾರೆ. ಅವರ ಜನ್ಮ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸುತ್ತಿರುವುದು ನಮ್ಮ ದೇಶಕ್ಕೆ ಹೆಮ್ಮೆ ತರುವ ವಿಚಾರ ಎಂದು ಛಲವಾದಿ ಮಹಾಸಭಾದ ಕಾರ್ಯದರ್ಶಿ ತಿಮ್ಮಣ್ಣ ಹೇಳಿದ್ದಾರೆ.
ಅವರು ಪಟ್ಟಣದ ಅಂಬೇಡ್ಕರ್ ಭವನದ ಸಭಾಂಗಣದಲ್ಲಿ ಜೈಭೀಮ್ ಆಟೊ ಚಾಲಕರ ಮತ್ತು ಮಾಲಕರ ಸಂಘದಿಂದ ಹಮ್ಮಿಕೊಂಡಿದ್ದ ಡಾ. ಬಿ.ಆರ್.ಅಂಬೇಡ್ಕರ್‌ರವರ 125ನೆ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಅಂಬೇಡ್ಕರ್‌ರವರು ಸಾಮಾಜಿಕ, ಸಮಾನತೆ, ಅಸ್ಪಶ್ಯತೆ ನಿವಾರಣೆಗಾಗಿ ಹೋರಾಟ ನಡೆಸಿದ ಮಹಾನ್ ಭಾರತೀಯ ನಾಯಕರಲ್ಲಿ ಒಬ್ಬರು. ಅವರ ಅಧ್ಯಯನಶೀಲತೆ ಅಪಾರವಾದದ್ದು. ತಮ್ಮ ಪಾಂಡಿತ್ಯದಿಂದ ಯಾರ ಕೈಯಲ್ಲೂ ಸಾಧ್ಯವಾಗದಂತಹ ಸಂವಿಧಾನವನ್ನು ರಚನೆ ಮಾಡಿ ದೇಶದಲ್ಲಿಯೇ ಹೆಸರುವಾಸಿಯಾಗಿದ್ದಾರೆ. ಅವರ ಆದರ್ಶ ವ್ಯಕ್ತಿತ್ವವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು. ಛಲವಾದಿ ಮಹಾಸಭಾದ ಅಧ್ಯಕ್ಷ ಯು.ಆರ್.ರುದ್ರಯ್ಯ ಮಾತನಾಡಿ, ಕೊಲಂಬಿಯಾ ವಿಶ್ವ ವಿದ್ಯಾನಿಲಯದ ಮುಖ್ಯ ದ್ವಾರದಲ್ಲಿ ಅಂಬೇಡ್ಕರ್‌ರವರ ಭಾವಚಿತ್ರವನ್ನು ಇರಿಸಲಾಗಿದೆ. ಇದು ನಮಗೆ ಸಂತಸ ತರುವ ವಿಚಾರ. ನಮ್ಮ ದೇಶದಲ್ಲಿ ಮಾಡಬೇಕಾದ ಕೆಲಸವನ್ನು ಹೊರ ದೇಶವಾದ ಅಮೆರಿಕ ಮಾಡಿ ತೋರಿಸಿತು. ಅದಕ್ಕಾಗಿ ನಾವು ಎಷ್ಟು ಧನ್ಯವಾದಗಳನ್ನು ಸಲ್ಲಿಸಿದರೂ ಸಾಲದು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಜೈಭೀಮ್ ಆಟೊ ಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷ ರಮೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಟೊ ಚಾಲಕರು ಕೇವಲ ಆಟೊ ಚಾಲನೆ ಮಾಡಿಕೊಂಡು ಬದುಕು ನಡೆಸುವುದರ ಜೊತೆಗೆ ಸಮಾಜದ ಒಳಿತಿಗಾಗಿ ನಮ್ಮಲ್ಲಾದ ಕೊಡುಗೆಯನ್ನು ನೀಡಬೇಕು ಎಂದರು. ಜಿ.ಪಂ. ಮಾಜಿ ಸದಸ್ಯ ಹೂವಪ್ಪ, ಪಪಂ ನಾಮ ನಿರ್ದೇಶನ ಸದಸ್ಯ ಎಚ್.ಪಿ. ರಮೇಶ್, ಛಲವಾದಿ ಮಹಾಸಭಾದ ಮುಖಂಡರಾದ ಎಂ.ಎಸ್.ಕೃಷ್ಣ, ಹೆಸಗಲ್ ಗಿರೀಶ್, ಸ್ವತಶ್ಚಲಿ ಆಟೊ ಚಾಲಕ ಹಾಗೂ ಮಾಲಕರ ಸಂಘದ ಅಧ್ಯಕ್ಷ ಸುೀರ್, ಉಪಾಧ್ಯಕ್ಷ ಅಜಿತ್, ಚಂದ್ರು ಉಪಸ್ಥಿತರಿದ್ದರು.







