ಜಯಪುರದಲ್ಲಿ ಕುಡಿಯುವ ನೀರಿಗಾಗಿ ಗ್ರಾಮಸ್ಥರ ಪರದಾಟ

ತರೀಕೆರೆ, ಎ.30: ಲಿಂಗದಹಳ್ಳಿ ಹೋಬಳಿಯ ಮಲೆನಾಡಿನ ತಪ್ಪಲಿನಲ್ಲಿರುವ ತಿಗಡ ಗ್ರಾಮ ಪಂಚಾಯತ್‌ನ ಜನ ಪ್ರತಿನಿಧಿಗಳು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದಾಗಿ ಪಂಚಾಯತ್ ವ್ಯಾಪ್ತಿಯ ಜಯಪುರ, ತಣಿಗೇಬೈಲು ಮುಂತಾದ ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಿದ್ದು, ಜಯಪುರ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪರದಾಡುತ್ತಿದ್ದು, ಗ್ರಾಮಸ್ಥರು ಕುಡಿಯುವ ನೀರನ್ನು ಅರಸಿಕೊಂಡು ಗ್ರಾಮದ ಅಕ್ಕ ಪಕ್ಕಗಳಲ್ಲಿರುವ ಖಾಸಗಿ ವ್ಯಕ್ತಿಗಳ ಕೊಳವೆ ಬಾವಿಗಳನ್ನು ಅವಲಂಬಿ ಸಬೇಕಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ತಿಗಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೆಮ್ಮಣ್ಣುಗುಂಡಿ, ಕಲ್ಲತ್ತಿಗಿರಿ, ಭಾಗದಿಂದ ಕೆಳಮುಖವಾಗಿ ಹರಿಯುತ್ತಿರುವ ಹಳ್ಳಕೊಳ್ಳಗಳಿಂದ ಎಂತಹ ಭೀಕರ ಬರಗಾಲವಿದ್ದರೂ ಸಹ ಇಲ್ಲಿ ಹರಿಯುವ ಭೀಮನಹಳ್ಳ, ಕೊಂಡೇಖಾನ್‌ಹಳ್ಳ, ಕಲ್ಲತ್ತಿ ಜಲಪಾತದ ಹಳ್ಳಗಳು ಈ ಭಾಗದ ಜನರ ಕುಡಿಯುವ ನೀರಿನ ವ್ಯವಸ್ಥೆಗೆ ಬೇಕಾಗಿರುವಷ್ಟು ನೀರನ್ನು ಒದಗಿಸುತ್ತಾ ಬರುತ್ತಿವೆ. ಈ ಹಳ್ಳಗಳಿಂದ ಲಿಂಗದಹಳ್ಳಿ, ನಂದಿಬಟ್ಟಲು ಗ್ರಾಮ ಪಂಚಾಯತ್‌ಗಳೂ ಸೇರಿದಂತೆ ಸುತ್ತ ಮುತ್ತಲ ಅನೇಕ ಗ್ರಾಮ ಪಂಚಾಯತ್‌ಗಳ ಜನಪ್ರತಿನಿಧಿಗಳು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸುತ್ತಾ ಕುಡಿಯುವ ನೀರಿನ ಸರಬರಾಜಿಗಾಗಿ ಹತ್ತಾರು ಕಿ.ಮೀ. ದೂರದವರೆಗೂ ಪೈಪ್‌ಲೈನ್‌ಗಳನ್ನು ಅಳವಡಿಸಿಕೊಂಡು ಆಯಾ ಭಾಗದ ಗ್ರಾಮಸ್ಥರಿಗೆ ಸಮರ್ಪಕವಾಗಿ ಅತ್ಯುತ್ತಮ ಸಿಹಿ ನೀರನ್ನು ಒದಗಿಸುತ್ತಿದ್ದಾರೆ. ಆದರೆ ದೀಪದ ಕೆಳಗೆ ಕತ್ತಲೆ ಎಂಬಂತೆ ತಿಗಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಅನೇಕ ಹಳ್ಳ ಕೊಳ್ಳಗಳಲ್ಲಿ ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳಿಗೂ ಸಮರ್ಪಕವಾಗಿ ನೀಡುವಷ್ಟು ನೈಸರ್ಗಿಕ ನೀರಿನ ಲಭ್ಯತೆ ಇದ್ದರೂ, ಗ್ರಾಮ ಪಂಚಾಯತ್‌ನವರು ಇತ್ತ ಗಮನ ಹರಿಸದೆ, ಕೊಳವೆ ಬಾವಿ, ತೆರೆದ ಬಾವಿಗಳ ಮೂಲಕ ನೀರನ್ನು ಒದಗಿಸುವ ಹುಸಿ ಭರವಸೆ ನೀಡುತ್ತಾ ಕಾಲಹರಣ ಮಾಡುತ್ತಿದ್ದು, ಕೊಳವೆ ಬಾವಿಗಳಿಗೆ ಸಂಪರ್ಕ ಕಲ್ಪಿಸುವ ವಿದ್ಯುತ್ ವ್ಯವಸ್ಥೆಯೂ ಸರಿಯಿಲ್ಲದ ಕಾರಣ ಕೊಳವೆ ಬಾವಿಗಳಿಗೆ ಅಳವಡಿಸಲಾಗಿರುವ ಮೋಟರ್‌ಗಳು ಕಾರ್ಯ ನಿರ್ವಹಿಸದೆ ಇರುವುದರಿಂದಾಗಿ ಗ್ರಾಮಸ್ಥರಿಗೆ ಕುಡಿಯುವ ನೀರಿನ ತೊಂದರೆಯುಂಟಾಗಿದೆ ಎಂದು ಗ್ರಾಮಸ್ಥರಾದ ದೇವಿಕಾರಾಣಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಿಗಡ ಗ್ರಾಮ ಪಂಚಾಯತ್‌ಗೆ ಸಂಸದರು, ಶಾಸಕರು, ಮತ್ತು ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ತಮ್ಮ ವತಿಯಿಂದ ಆಗಬಹುದಾದ ಎಲ್ಲ ನೆರವುಗಳನ್ನು ನೀಡುತ್ತಿದ್ದರೂ, ಗ್ರಾಮ ಪಂಚಾಯತ್‌ರವರ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯಗಳಿಂದಾಗಿ ಕುಡಿಯುವ ನೀರಿನ ತೊಂದರೆ ಎದುರಿಸುತ್ತಿರುವುದು ವಿಷಾದನೀಯವಾಗಿದ್ದು, ಕೂಡಲೇ ಜಯಪುರ ಗ್ರಾಮಕ್ಕೆ ಕೊಂಡೇಖಾನ್‌ಹಳ್ಳ ಅಥವಾ ಭೀಮನಹಳ್ಳದಿಂದ ಗ್ರಾವಿಟಿಯ ಮೂಲಕ ಕುಡಿಯುವ ನೀರನ್ನು ಒದಗಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕಾಗಿರುವುದು ಅತ್ಯಗತ್ಯವಾಗಿದೆ ಎಂದು ಗ್ರಾಮಸ್ಥರು ಪತ್ರಿಕೆಯ ಮೂಲಕ ಮನವಿ ಮಾಡಿದ್ದಾರೆ.







