ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್: ಸೆಮಿ ಫೈನಲ್‌ನಲ್ಲಿ ಸೈನಾಗೆ ಸೋಲು

ವುಹಾನ್(ಚೀನಾ), ಎ.30: ಚೀನಾದ ಯೀಹಾನ್ ವಾಂಗ್ ವಿರುದ್ಧ ಸೆಮಿಫೈನಲ್‌ನಲ್ಲಿ ಸೋತಿರುವ ಭಾರತದ ಸ್ಟಾರ್ ಶಟ್ಲರ್ ಸೈನಾ ನೆಹ್ವಾಲ್ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಿಂದ ಹೊರ ನಡೆದಿದ್ದಾರೆ.
ಶನಿವಾರ ಇಲ್ಲಿನ ವುಹಾನ್ ಸ್ಪೋರ್ಟ್ಸ್ ಸೆಂಟರ್‌ನಲ್ಲಿ ನಡೆದ ಅಂತಿಮ ನಾಲ್ಕರ ಸುತ್ತಿನ ಪಂದ್ಯದಲ್ಲಿ 26ರ ಹರೆಯದ ಸೈನಾ ಸ್ಥಳೀಯ ಆಟಗಾರ್ತಿ ವಾಂಗ್ ವಿರುದ್ಧ 16-21, 14-21 ಗೇಮ್‌ಗಳ ಅಂತರದಿಂದ ಶರಣಾಗಿದ್ದಾರೆ. ಸೈನಾ 2011ರ ವಿಶ್ವ ಚಾಂಪಿಯನ್ ವಾಂಗ್ ವಿರುದ್ಧ ಆಡಿರುವ 15ನೆ ಪಂದ್ಯದಲ್ಲಿ 11ನೆ ಸೋಲು ಅನುಭವಿಸಿದ್ದಾರೆ.
41 ನಿಮಿಷಗಳ ಪಂದ್ಯದಲ್ಲಿ ಸೈನಾರನ್ನು ಸೋಲಿಸಿರುವ ವಾಂಗ್ ರವಿವಾರ ನಡೆಯಲಿರುವ ಫೈನಲ್‌ನಲ್ಲಿ ತಮ್ಮದೇ ದೇಶದ ಹಾಲಿ ಒಲಿಂಪಿಕ್ಸ್ ಚಾಂಪಿಯನ್ ಲೀ ಕ್ಸುರುಯಿ ಅವರನ್ನು ಎದುರಿಸಲಿದ್ದಾರೆ. ಕ್ಸುರುಯಿ ಮತ್ತೊಂದು ಸೆಮಿ ಫೈನಲ್‌ನಲ್ಲಿ ದಕ್ಷಿಣ ಕೊರಿಯಾದ ಸಂಗ್ ಜಿ ಹ್ಯೂಯಾನ್‌ರನ್ನು 22-20, 21-11 ಗೇಮ್‌ಗಳ ಅಂತರದಿಂದ ಮಣಿಸಿದ್ದಾರೆ.
ವಾಂಗ್ ಹಾಗೂ ಕ್ಸುರುಯಿ ತಲಾ 9 ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ಮೂರನೆ ಬಾರಿ ಏಷ್ಯನ್ ಪ್ರಶಸ್ತಿ ಜಯಿಸುವ ವಿಶ್ವಾಸದಲ್ಲಿದ್ದಾರೆ.
ವಿಶ್ವದ ನಂ.8ನೆ ಆಟಗಾರ್ತಿ ಸೈನಾ 9-6 ಮುನ್ನಡೆಯೊಂದಿಗೆ ಸಾಧಾರಣ ಆರಂಭ ಪಡೆದಿದ್ದರು. ಆದರೆ, ಸೈನಾಗೆ ತಕ್ಷಣವೇ ತಿರುಗೇಟು ನೀಡಿದ ಯೀಹಾನ್ ಮೊದಲ ಗೇಮ್‌ನ್ನು 16-11 ಅಂತರದಿಂದ ವಶಪಡಿಸಿಕೊಂಡರು.
ಎರಡನೆ ಗೇಮ್‌ನಲ್ಲಿ 28ರ ಹರೆಯದ ಯೀಹಾನ್ ಆರಂಭದಲ್ಲೇ ಮೇಲುಗೈ ಸಾಧಿಸಿ ತನ್ನ ಉದ್ದೇಶವನ್ನು ಸ್ಪಷ್ಟಪಡಿಸಿದರು. ಸತತ 5 ಅಂಕವನ್ನು ಗಳಿಸಿದ ಯೀಹಾನ್ 21-14 ರಿಂದ ಗೆಲುವು ಸಾಧಿಸಿ ಫೈನಲ್‌ಗೆ ಪ್ರವೇಶಿಸಿದರು.







