ಪುಣೆಗೆ ಇಂದು ಮುಂಬೈ ಇಂಡಿಯನ್ಸ್ ಸವಾಲು
ಪುಣೆ, ಎ.30: ಈ ವರ್ಷದ ಐಪಿಎಲ್‌ನಲ್ಲಿ ಐದನೆ ಸೋಲಿನಿಂದ ಕಂಗೆಟ್ಟಿರುವ ರೈಸಿಂಗ್ ಪುಣೆ ವಾರಿಯರ್ಸ್ ತಂಡ ರವಿವಾರ ನಡೆಯಲಿರುವ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.
ಎಂಎಸ್ ಧೋನಿ ನಾಯಕತ್ವದ ಪುಣೆ ತಂಡ ತನ್ನ ಚೊಚ್ಚಲ ಐಪಿಎಲ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಈ ತನಕ ಆಡಿರುವ 7 ಪಂದ್ಯಗಳ ಪೈಕಿ 5 ಪಂದ್ಯಗಳನ್ನು ಸೋತಿದೆ. ಕೇವಲ 4 ಅಂಕವನ್ನು ಗಳಿಸಿರುವ ಪುಣೆ 8 ತಂಡಗಳಿರುವ ಅಂಕಪಟ್ಟಿಯಲ್ಲಿ ಆರನೆ ಸ್ಥಾನದಲ್ಲಿದೆ. ಪುಣೆಗೆ ಅಂಕಪಟ್ಟಿಯಲ್ಲಿ ಅಗ್ರ ನಾಲ್ಕನೆ ಸ್ಥಾನ ಪಡೆಯಬೇಕಾದರೆ ಉಳಿದ ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ. ಪುಣೆ ತಂಡ ಟೂರ್ನಿಯ ಮೊದಲ ಮುಖಾಮುಖಿಯಲ್ಲಿ ಮುಂಬೈಯನ್ನು 9 ವಿಕೆಟ್‌ಗಳ ಅಂತರದಿಂದ ಸುಲಭವಾಗಿ ಮಣಿಸಿತ್ತು.
ಧೋನಿಗೆ ಸಮತೋಲಿತ ಬೌಲಿಂಗ್ ಪಡೆಯನ್ನು ಆಯ್ಕೆ ಮಾಡುವುದು ದೊಡ್ಡ ಸವಾಲಾಗಿದೆ. ಗಾಯದ ಸಮಸ್ಯೆಯಿಂದಾಗಿ ತಂಡದ ಇಬ್ಬರು ಪ್ರಮುಖ ಆಟಗಾರರಾದ ಎಫ್‌ಡು ಪ್ಲೆಸಿಸ್ ಹಾಗೂ ಕೆವಿನ್ ಪೀಟರ್ಸನ್ ಕೂಟದಿಂದ ಹೊರಗುಳಿದಿದ್ದರೂ ಅಜಿಂಕ್ಯರಹಾನೆ, ಸ್ಟೀವನ್ ಸ್ಮಿತ್ ಹಾಗೂ ಧೋನಿ ಉತ್ತಮ ಪ್ರದರ್ಶನದಿಂದ ಈ ಇಬ್ಬರ ಅನುಪಸ್ಥಿತಿ ಕಾಡದಂತೆ ಮಾಡಿದ್ದಾರೆ.
ಇದೀಗ ಪ್ಲೆಸಿಸ್ ಬದಲಿಗೆ ತಂಡವನ್ನು ಸೇರಿಕೊಂಡಿರುವ ಆಸ್ಟ್ರೇಲಿಯದ ಉಸ್ಮಾನ್ ಖ್ವಾಜಾ ಪುಣೆಯ ಬ್ಯಾಟಿಂಗ್‌ಗೆ ಮತ್ತಷ್ಟು ಬಲ ನೀಡಲಿದ್ದಾರೆ. ಗುಜರಾತ್ ಲಯನ್ಸ್ ವಿರುದ್ಧ ಶುಕ್ರವಾರ 54 ಎಸೆತಗಳಲ್ಲಿ 101 ರನ್ ಗಳಿಸಿದ್ದ ಸ್ಟೀವನ್ ಸ್ಮಿತ್ ಮೊದಲಿನ ಲಯಕ್ಕೆ ಮರಳಿದ್ದರು. ಇದು ಪುಣೆ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ.
ಗುಜರಾತ್ ವಿರುದ್ಧ 195 ರನ್ ಗಳಿಸಿದ್ದ ಹೊರತಾಗಿಯೂ ಪುಣೆ ತಂಡ ಕೊನೆಯ ಎಸೆತದಲ್ಲಿ 3 ವಿಕೆಟ್‌ಗಳ ಅಂತರದಿಂದ ಸೋತಿತ್ತು. ಅಲ್ಬಿ ಮೊರ್ಕೆಲ್, ಅಶೋಕ್‌ದಿಂಡಾ, ತಿಸ್ಸಾರ ಪೆರೇರಾ ಹಾಗೂ ಆರ್.ಅಶ್ವಿನ್ ದುಬಾರಿ ಆಗಿದ್ದರು.
ಮತ್ತೊಂದಡೆ, ಪುಣೆಯ ಎದುರಾಳಿ ಮುಂಬೈ ತಂಡ 8 ಪಂದ್ಯಗಳಲ್ಲಿ 8 ಅಂಕವನ್ನು ಗಳಿಸಿ ಅಂಕಪಟ್ಟಿಯಲ್ಲಿ 3ನೆ ಸ್ಥಾನದಲ್ಲಿದೆ. ಕಳೆದೆರಡು ಪಂದ್ಯಗಳಲ್ಲಿ ಪಂಜಾಬ್ ಹಾಗೂ ಕೆಕೆಆರ್ ವಿರುದ್ಧ ಜಯ ಸಾಧಿಸಿ ಆತ್ಮವಿಶ್ವಾಸ ವೃದ್ದಿಸಿಕೊಂಡಿದೆ.
ಮುಂಬೈ ಬ್ಯಾಟಿಂಗ್ ವಿಭಾಗದಲ್ಲಿ ಸ್ವತಹಾ ನಾಯಕ ರೋಹಿತ್ ಶರ್ಮ ಜವಾಬ್ದಾರಿಯಿಂದ ಆಡುತ್ತಿದ್ದಾರೆ. ಮುಂಬೈನ ಕಳೆದೆರಡು ಪಂದ್ಯಗಳ ಗೆಲುವಿಗೆ ‘ಬಿಗ್ ಹಿಟ್ಟರ್’ ಕೀರನ್ ಪೊಲಾರ್ಡ್ ಮಹತ್ವದ ಕೊಡುಗೆ ನೀಡಿದ್ದರು. ಪೊಲಾರ್ಡ್ ಕೆಕೆಆರ್ ವಿರುದ್ಧದ ಕಳೆದ ಪಂದ್ಯದಲ್ಲಿ ಕೇವಲ 17 ಎಸೆತಗಳಲ್ಲಿ ಔಟಾಗದೆ 51 ರನ್ ಬಾರಿಸಿ ತಂಡಕ್ಕೆ ಆರು ವಿಕೆಟ್‌ಗಳ ಗೆಲುವು ತಂದುಕೊಟ್ಟಿದ್ದರು.
ಆರಂಭಿಕ ಜೊತೆಗಾರರು ಹಾಗೂ ಮಧ್ಯಮ ಕ್ರಮಾಂಕದ ಆಟಗಾರ ಜೋಸ್ ಬಟ್ಲರ್ ಅನಿಶ್ಚಿತ ಫಾರ್ಮ್ ರೋಹಿತ್‌ಗೆ ತಲೆನೋವಾಗಿ ಪರಿಣಮಿಸಿದೆ. ಪಾಂಡ್ಯ ಸಹೋದರರು ಅದರಲ್ಲೂ ಮುಖ್ಯವಾಗಿ ಕ್ರುನಾಲ್ ಪಾಂಡ್ಯ ಆಲ್‌ರೌಂಡ್ ಆಟದಿಂದ ತಂಡಕ್ಕೆ ನೆರವಾಗುತ್ತಿದ್ದಾರೆ.
ಬೌಲಿಂಗ್‌ನಲ್ಲಿ ನ್ಯೂಝಿಲೆಂಡ್‌ನ ವೇಗಿದ್ವಯರಾದ ಟಿಮ್ ಸೌಥಿ ಹಾಗೂ ಮಿಚೆಲ್ ಮೆಕ್ಲಿನಘನ್ ಮುಂಬೈಗೆ ಆಸರೆಯಾಗುತ್ತಿದ್ದಾರೆ. ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಈವರೆಗೆ ಉತ್ತಮ ಪ್ರದರ್ಶನ ನೀಡಿದ್ದಾರೆ.
ಪಂದ್ಯ ಆರಂಭದ ಸಮಯ: ರಾತ್ರಿ 8:00







