ಝಹೀರ್-ಬ್ರಾಥ್‌ವೈಟ್ ಪ್ರಹಾರ; ಡೇರ್‌ಡೆವಿಲ್ಸ್‌ಗೆ 27ರನ್‌ಗಳ ಜಯ
ಫಲ ನೀಡದ ಉತ್ತಪ್ಪ ಹೋರಾಟ* ಎರಡನೆ ಸ್ಥಾನಕ್ಕೆ ಲಗ್ಗೆಯಿಟ್ಟ ಡೆಲ್ಲಿ

ಹೊಸದಿಲ್ಲಿ, ಎ.30: ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಬ್ಯಾಟಿಂಗ್ ಹಾಗೂಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 27 ರನ್‌ಗಳ ಜಯ ಗಳಿಸಿದೆ.
ಫಿರೋಝ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಟೂರ್ನಿಯ 26 ನೆ ಪಂದ್ಯದಲ್ಲಿ ಪಂದ್ಯದಲ್ಲಿ ಗೆಲುವಿಗೆ 187 ರನ್‌ಗಳ ಸವಾಲನ್ನು ಪಡೆದ ಕೋಲ್ಕತಾ ನೈಟ್ ರೈಡರ್ಸ್ ತಂಡ ನಾಯಕ ಝಹೀರ್ ಖಾನ್(3-21) ಮತ್ತು ಬ್ರಾಥ್‌ವೈಟ್(3-47) ಪ್ರಹಾರವನ್ನು ಎದುರಿಸಲಾರದೆ 18.3 ಓವರ್‌ಗಳಲ್ಲಿ 159 ರನ್‌ಗಳಿಗೆ ಆಲೌಟಾಯಿತು. ಆಲ್‌ರೌಂಡ್ ಪ್ರದರ್ಶನ ನೀಡಿದ ಬ್ರಾಥ್‌ವೈಟ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ 72 ರನ್(52ಎ, 6ಬೌ,2ಸಿ) ಗಳಿಸಿ ಏಕಾಂಗಿ ಹೋರಾಟ ನಡೆಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ನಾಯಕ ಗಂಭೀರ್ ತನ್ನ ಹುಟ್ಟೂರಿನಲ್ಲಿ ಅವರು ಝಹೀರ್ ಖಾನ್ ದಾಳಿಯನ್ನು ಎದುರಿಸಲಾರದೆ 6 ರನ್ ಗಳಿಸಿ ಅಯ್ಯರ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದರು. ಪಿಯೂಷ್ ಚಾವ್ಲಾ(8) ಭಡ್ತಿ ಪಡೆದು ಆಗಮಿಸಿದರೂ ಅವರಿಗೆ ಖಾನ್ ಮಿಂಚಲು ಅವಕಾಶ ನೀಡಲಿಲ್ಲ.
ಯೂಸುಫ್ ಪಠಾಣ್(10), ಸೂರ್ಯಕುಮಾರ್ ಯಾದವ್(21), ಆ್ಯಂಡ್ರೆ ರಸ್ಸೆಲ್ (17) ಎರಡಂಕೆಯ ಸ್ಕೋರ್ ದಾಖಲಿಸಿದರು. ಆರ್. ಸತೀಶ್ (6), ಉಮೇಶ್ ಯಾದವ್(2), ಸುನೀಲ್ ನರೇನ್(4) ಒಂದಕೆಯ ಕೊಡುಗೆ ನೀಡಲಷ್ಟೇ ಶಕ್ತರಾದರು.
ಉತ್ತಪ್ಪ ತಂಡದ ಗೆಲುವಿಗೆ ಏಕಾಂಗಿ ಹೋರಾಟ ನಡೆಸುವಾಗ ಅವರ ನೆರವಿಗೆ ಯಾರೂ ಬರಲಿಲ್ಲ. ಆರನೆ ವಿಕೆಟ್‌ಗೆ ಉತ್ತಪ್ಪ ಮತ್ತು ರಸ್ಸೆಲ್ 44 ರನ್‌ಗಳ ಕೊಡುಗೆ ನೀಡಿರುವುದು ತಂಡದ ಪರ ದಾಖಲಾದ ಗರಿಷ್ಠ ರನ್‌ಗಳ ಜೊತೆಯಾಟ ವಾಗಿದೆ.
ಡೆಲ್ಲಿ 186/8: ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದಿತ್ತು. ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 186 ರನ್ ಗಳಿಸಿತ್ತು.
ಆಂಡ್ರೆ ರಸ್ಸೆಲ್(3-26) ಮತ್ತು ಮತ್ತು ಉಮೇಶ್ ಯಾದವ್(3-33) ದಾಳಿಗೆ ಸಿಲುಕಿದ ಡೆಲ್ಲಿ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 186 ರನ್ ಗಳಿಸಿತ್ತು.
ಡೆಲ್ಲಿ 5 ಓವರ್‌ಗಳಲ್ಲಿ 32 ರನ್ ಸೇರಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತು.
ಆರಂಭಿಕ ದಾಂಡಿಗ ಕ್ವಿಂಟನ್ ಡಿ ಕಾಕ್ (1), ಶ್ರೇಯಸ್ ಅಯ್ಯರ್(0) ಮತ್ತು ಸಂಜು ಸ್ಯಾಮ್ಸನ್(15) ಔಟಾದ ಬಳಿಕ ಕರುಣ್ ನಾಯರ್ (68) ಮತ್ತು ಸ್ಯಾಮ್ ಬಿಲ್ಲಿಂಗ್ಸ್(54) ನಾಲ್ಕನೆ ವಿಕೆಟ್‌ಗೆ 105 ರನ್‌ಗಳ ಜೊತೆಯಾಟ ನೀಡಿ ತಂಡದ ಸ್ಕೋರ್‌ನ್ನು 16.2 ಓವರ್‌ಗಳಲ್ಲಿ 137ಕ್ಕೆ ಏರಿಸಿದರು.
ವಿಂಡೀಸ್‌ನ ಆಲ್‌ರೌಂಡರ್ ಬ್ರಾಥ್‌ವೈಟ್ 11 ಎಸೆತಗಳಲ್ಲಿ 3 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 34 ರನ್ ಗಳಿಸಿದರು.
ಡೆಲ್ಲಿ ತಂಡ ಮೊದಲ ಓವರ್‌ನಲ್ಲಿ ಎರಡು ವಿಕೆಟ್ ಕಳೆದುಕೊಂಡಿತ್ತು.ರಸ್ಸೆಲ್ ಎರಡು ವಿಕೆಟ್ ಉಡಾಯಿಸಿ ಕೋಲ್ಕತಾ ತಂಡಕ್ಕೆ ಯಶಸ್ಸು ತಂದುಕೊಟ್ಟರು.ಆದರೆ ಡೆಲ್ಲಿ ನಿಧಾನವಾಗಿ ಚೇತರಿಸಿಕೊಂಡಿತ್ತು.
,,,,,





