ಹೊಸ ಕೃಷಿ ಮಾದರಿ ಸೃಷ್ಟಿಸುವ ಆವಶ್ಯಕತೆಯಿದೆ: ಡಾ.ಕೆ.ಕಸ್ತೂರಿರಂಗನ್
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ 50ನೆ ಘಟಿಕೋತ್ಸವ

ಬೆಂಗಳೂರು, ಎ. 30: ಕೃಷಿ ಕ್ಷೇತ್ರವನ್ನು ಬಲಪಡಿಸಲು ಆಧುನಿಕ ತಂತ್ರಜ್ಞಾನ ಮತ್ತು ಸಂಶೋಧನೆಗಳನ್ನು ಕ್ರೋಡೀಕರಿಸಿ ನಿಖರವಾದ ಕೃಷಿ ಮಾದರಿಯನ್ನು ಸೃಷ್ಟಿಮಾಡುವ ಆವಶ್ಯಕತೆಯಿದೆ ಎಂದು ಹೊಸದಿಲ್ಲಿ ಜವಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಕುಲಪತಿ ಡಾ.ಕೆ.ಕಸ್ತೂರಿರಂಗನ್ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ನಗರದ ಜಿಕೆವಿಕೆ ಆವರಣದಲ್ಲಿನ ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಸಮಾವೇಶ ಭವನದಲ್ಲಿ ಆಯೋಜಿಸಿದ್ದ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ 50ನೆ ಘಟಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.
ದೇಶ ಹಾಗೂ ವಿದೇಶಗಳಲ್ಲಿ ಕೃಷಿಗೆ ಸಂಬಂಧಿಸಿದಂತೆ ಹಲವಾರು ತಂತ್ರಜ್ಞಾನ ಮತ್ತು ಸಂಶೋಧನೆಗಳು ನಡೆದಿವೆ. ಈ ಎಲ್ಲ ಬಾಹ್ಯಾಕಾಶ, ಜೈವಿಕ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಇತರೆ ಕೃಷಿಗೆ ಸಂಬಂಧಿಸಿ ತಂತ್ರಜ್ಞಾನಗಳನ್ನು ಕ್ರೋಡೀಕರಿಸಿ ನಿಖರವಾದ ಕೃಷಿ ಪದ್ಧ್ದತಿಯನ್ನು ಹುಟ್ಟುಹಾಕಬೇಕು. ಈ ಮೂಲಕ ಕೃಷಿಯಲ್ಲಿ ಪುನಃ ಹಸಿರು ಕ್ರಾಂತಿ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಇತ್ತೀಚಿನ ದಿನಗಳಲ್ಲಿ ಜಾಗತಿಕ ತಾಪಮಾನ ಗಂಭೀರ ಸ್ವರೂಪ ಪಡೆದುಕೊಂಡಿದೆ. ಅಲ್ಲದೆ ಈ ತಾಪಮಾನ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದು ಇಡೀ ಪ್ರಕೃತಿ ವಿಕೋಪದ ಮುನ್ಸೂಚನೆಯಂತೆ ಗೋಚರಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಕೃಷಿಯಿಂದ ಜಾಗತಿಕ ತಾಪಮಾನವನ್ನು ಕಡಿವಾಣ ಹಾಕಲು ಸಾಧ್ಯವೇ ಎಂಬುದರ ಬಗ್ಗೆ ಕೃಷಿ ವಿದ್ಯಾರ್ಥಿಗಳು, ವಿಜ್ಞಾನಿಗಳು ಹೆಚ್ಚು ಸಂಶೋಧನೆ ಮಾಡಬೇಕು ಎಂದು ಹೇಳಿದರು.
ರೈತರಿಗೆ ಮಣ್ಣಿನ ಫಲವತ್ತತೆಯನ್ನು ರಕ್ಷಣೆ ಮಾಡುವ ವಿಧಾನ, ಒಣ ಬೇಸಾಯ ಪದ್ಧತಿ, ಹನಿ ನೀರಾವರಿಯ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕಿದೆ. ಕೃಷಿಗೆ ಸಂಬಂಧಿಸಿ ಆಧುನಿಕ ತಂತ್ರಾಜ್ಞಾನಗಳನ್ನು ಬಳಸಿಕೊಂಡು ಇಳುವರಿಯನ್ನು ಹೆಚ್ಚಿಸಬೇಕು. ಈ ಮೂಲಕ ದೇಶದಲ್ಲಿನ ಆಹಾರದ ಕೊರತೆಯನ್ನು ನೀಗಿಸಲು ಸಾಧ್ಯವೆಂದು ಪ್ರತಿಪಾದಿಸಿದರು.
ಕೇಂದ್ರ ಹಾಗೂ ರಾಜ್ಯ ಬಜೆಟ್‌ಗಳಲ್ಲಿ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅಲ್ಲದೆ ಕೃಷಿಗೆ ಸಂಬಂಧಿಸಿದಂತೆ ಹಲವಾರು ಜನಪರ ಯೋಜನೆಗಳನ್ನು ಘೋಷಣೆ ಮಾಡಿರುವುದು ಸಂತಸದ ವಿಷಯ. ಅಲ್ಲದೆ ದೇಶದ ಆರ್ಥಿಕತೆಗೆ ಕೃಷಿ ವಲಯವೇ ಬೆನ್ನೆಲುಬು. ಹೀಗಾಗಿ ದೇಶಿಯ ಕೃಷಿ ಪದ್ಧತಿಯಲ್ಲಿ ಇನ್ನಷ್ಟು ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಬೇಕಿದೆ ಎಂದು ಹೇಳಿದರು.
ಘಟಿಕೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಿ.ಆರ್.ವಾಲಾ ಕೃಷಿ ವಿವಿಯ ಪಿಎಚ್‌ಡಿ, ಸ್ನಾತಕೋತ್ತರ, ಸ್ನಾತಕ ಪದವಿಯ ಒಟ್ಟು 922 ವಿದ್ಯಾರ್ಥಿಗಳಿಗೆ ಪದವಿಗಳನ್ನು ಪ್ರದಾನಿಸಲಾಯಿತು. ಅಲ್ಲದೆ 114 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ಪ್ರದಾನಿಸಲಾಯಿತು.
ಕೇರಳ ರಾಜ್ಯದ ಮೂಲದ ಎಂ.ಅಮೃತಲಕ್ಷ್ಮೀ ಕೃಷಿ ವಿವಿಯ ಸುವರ್ಣ ಮಹೋತ್ಸವದಲ್ಲಿ ಬರೋಬ್ಬರಿ ಏಳು ಚಿನ್ನದ ಪದಕಗಳನ್ನು ಪಡೆಯುವ ಮೂಲಕ ನೆರೆದಿದ್ದ ವಿದ್ಯಾರ್ಥಿ ಮತ್ತು ಪೋಷಕರನ್ನು ಕೆಲಕಾಲ ಮೂಖವಿಸ್ಮಿತರನ್ನಾಗಿಸಿದರು.
ಕೃಷಿ ಸಂಶೋಧಕಿಯಾಗಬೇಕೆಂಬ ಹಂಬಲದಿಂದ ಸತತ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಕೃಷಿ ವಿವಿಯ ಸುವರ್ಣ ಘಟಿಕೋತ್ಸವದಲ್ಲಿ ಏಳು ಚಿನ್ನದ ಪದಕಗಳನ್ನು ಪಡೆದಿರುವುದು ಪರಿಶ್ರಮಕ್ಕೆ ತಕ್ಕ ಫಲಸಿಕ್ಕಿದೆ ಎಂದು ಎಂದು ಸಂತಸ ಹಂಚಿಕೊಂಡರು. ಮುಂದಿನ ದಿನಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಸಂಶೋಧನೆಗಳ ಮುಖಾಂತರ ರೈತರಿಗೆ ಮತ್ತು ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ಆಸೆ ಇದೆ ಎಂದು ಹೇಳಿದರು.
ಹಾಸನ ಜಿಲ್ಲೆಯ ಸಕಲೇಶಪುರದ ಡಾ.ವಿನಯ್‌ಕುಮಾರ್ ಕೃಷಿ ವಿಷಯದಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡರು. ಮೂಲತಃ ಕೃಷಿ ಕುಟುಂಬದಿಂದ ಬಂದ ವಿನಯ್ ಪ್ರಸ್ತುತ ಗುಜರಾತಿನ ಆನಂದ್ ಕೃಷಿ ವಿವಿಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಈ ನನ್ನ ಸಾಧನೆಗೆ ನನ್ನ ತಂದೆಯೇ ಸ್ಫೂರ್ತಿ. ತನ್ನ ಶ್ರಮಕ್ಕೆ ಪ್ರತಿಫಲ ದೊರೆತಿದೆ ಮುಂದಿನ ದಿನಗಳಲ್ಲಿ ಉತ್ತಮ ಕೃಷಿ ವಿಜ್ಞಾನಿಯಾಗಿ ಕೃಷಿ ಚಟುವಟಿಕೆಗಳಲ್ಲಿನ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ವೈಜ್ಞಾನಿಕ ಸಂಶೋಧನೆಗಳ ಮಾಹಿತಿ ಹಾಗೂ ತಂತ್ರಜ್ಞಾನಗಳನ್ನು ಕೃಷಿಯಲ್ಲಿ ಅಳವಡಿಸಿಕೊಂಡರೆ ಅದು ಲಾಭದಾಯಕ ಕ್ಷೇತ್ರವನ್ನಾಗಿಸಿದರೆ ಆಗ ಯುವಜನಾಂಗ ತಾನಾಗಿಯೇ ಕೃಷಿಯತ್ತ ಮುಖ ಮಾಡುತ್ತದೆ. ಈ ಮೂಲಕ ಕೃಷಿಯನ್ನು ಇನ್ನಷ್ಟು ಸಮೃದ್ಧಗೊಳಿಸಬಹುದು ಎಂದು ‘ವಾರ್ತಾಭಾರತಿ’ಯೊಂದಿಗೆ ಅಭಿಪ್ರಾಯ ಹಂಚಿಕೊಂಡರು.







