ದಲಿತರು ಶೋಷಣೆ, ದಬ್ಬಾಳಿಕೆಗಳಿಂದ ಮುಕ್ತರಾಗಬೇಕಾದರೆ ಶಿಕ್ಷಣ ಮುಖ್ಯ: ಸೋಮನಾಥ್ ನಾಯಕ್

ಬೆಳ್ತಂಗಡಿ, ಎ.30: ದಲಿತರು ಶೋಷಣೆ, ದಬ್ಬಾಳಿಕೆಗಳಿಂದ ಮುಕ್ತರಾಗಬೇಕಾದರೆ ಶಿಕ್ಷಣ ಪಡೆಯಬೇಕು. ಅನಾದಿ ಕಾಲದಿಂದಲೂ ಧರ್ಮಶಾಸ್ತ್ರಗಳ ಭಯ ಮೂಡಿಸಿ ದಲಿತರನ್ನು ಊಳಿಗಮಾನ್ಯ ವ್ಯವಸ್ಥೆಯಲ್ಲಿ ಮುಂದುವರಿಸುತ್ತಿರುವುದು ದಲಿತೇತರ ಸಮಾಜಕ್ಕೆ ಅವಮಾನ ಎಂದು ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಸೋಮನಾಥ್ ನಾಯಕ್ ಹೇಳಿದ್ದಾರೆ.
ಟ್ರಸ್ಟ್ ಕಚೇರಿಯಲ್ಲಿ ನಡೆದ ಡಾ.ಬಿ.ಆರ್. ಅಂಬೇಡ್ಕರರ 125ನೆ ಜನ್ಮದಿನಾಚರಣೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಟ್ರಸ್ಟ್‌ನ ಸ್ಥಾಪಕ ಟ್ರಸ್ಟಿ ರಂಜನ್ ರಾವ್ ಯರ್ಡೂರ್, ಇತ್ತೀಚಿನ ಸರ್ವೇ ಪ್ರಕಾರ ರಾಜ್ಯದಲ್ಲಿ ಪರಿಶಿಷ್ಟ ವರ್ಗದ ಸುಮಾರು ಶೇ.72 ಮಕ್ಕಳು ಶಾಲೆ ಬಿಡುತ್ತಾರೆ. ದಲಿತರ ಶಿಕ್ಷಣಕ್ಕೆ ಮತ್ತು ಆರ್ಥಿಕ ಅಭಿವೃದ್ಧಿಗೆ ದಲಿತ ಮತ್ತು ದಲಿತಪರ ಸಂಘಟನೆಗಳು ಒತ್ತು ಕೊಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ನಾಗರಿಕ ಸೇವಾ ಟ್ರಸ್ಟ್ ಪ್ರವರ್ತಿತ ದಲಿತ ಅಭಿವೃದ್ಧಿಯ ಸಹಸಂಚಾಲಕ ಎಚ್.ಬಿ. ಮೋಹನ್ ಮಾತನಾಡಿ, ಅಂಬೇಡ್ಕರ್ ಒಂದು ವೇಳೆ ಈ ದೇಶದಲ್ಲಿ ಹುಟ್ಟದೇ ಇರುತ್ತಿದ್ದರೆ, ದಲಿತರು, ಹಿಂದುಳಿದ ವರ್ಗದವರು ಸಮಾನತೆ ಸ್ವಾತಂತ್ರ್ಯ, ಭ್ರಾತೃತ್ವದಲ್ಲಿ ಬದುಕಲು ಆಗುತ್ತಿರಲಿಲ್ಲ. ಅವರ ಪಾಂಡಿತ್ಯಪೂರ್ಣ ಸಂವಿಧಾನವು ದೇಶದ ಎಲ್ಲಾ ಜಾತಿ ವರ್ಗಗಳ ಏಳಿಗೆ ಬಯಸಿ ಬರೆದಿರುವುದಾಗಿದೆ. ನಾಗರಿಕ ಸೇವಾ ಟ್ರಸ್ಟ್ ದಲಿತಪರ ಚಿಂತನೆಗಳನ್ನು ಅಳವಡಿಸಿ ಅಸ್ಪ್ರಶ್ಯತೆ ನಿವಾರಣೆ ಮತ್ತು ಅಭಿವೃಧ್ಧಿ ಕಾರ್ಯಕ್ರಮ ಹಮ್ಮಿಕೊಂಡು ಬಂದಿದೆ ಎಂದರು.
ಟ್ರಸ್ಟ್‌ನ ಕಾರ್ಯದರ್ಶಿ ಜಯಪ್ರಕಾಶ್ ಭಟ್ ಸಿ.ಎಚ್. ಸ್ವಾಗತಿಸಿದರು. ದಲಿತ ಅಭಿವೃದ್ಧಿ ಸಮಿತಿಯ ಸಂಚಾಲಕ ನಾರಾಯಣ ಕಿಲಂಗೋಡಿ ಪ್ರಾಸ್ತಾವಿಸಿದರು. ಸಹಸಂಚಾಲಕ ಸೋಮ ಕೆ. ವಂದಿಸಿದರು







