5.36 ಲಕ್ಷ ಕೋಟಿ ರೂ. ಮೊತ್ತದ ಸ್ಪೆಕ್ಟ್ರಂ ಮಾರಾಟಕ್ಕೆ ಟೆಲಿಕಾಂ ಆಯೋಗ ಒಲವು
ಹೊಸದಿಲ್ಲಿ, ಎ.30: ಪ್ರಸ್ತುತ ಲಭ್ಯವಿರುವ ಎಲ್ಲ ತರಂಗಗುಚ್ಛ (ಸ್ಪೆಕ್ಟ್ರಂ)ಗಳನ್ನು, ಟೆಲಿಕಾಂ ನಿಯಂತ್ರಣ ಸಂಸ್ಥೆ ಟ್ರಾಯ್ ಶಿಫಾರಸು ಮಾಡಿರುವ ದರದಲ್ಲಿ ಹರಾಜು ಹಾಕುವುದಕ್ಕೆಟೆಲಿಕಾಂ ಆಯೋಗವು(ಟಿಸಿ) ಒಲವು ವ್ಯಕ್ತಪಡಿಸಿದೆ. ಇದರಿಂದಾಗಿ ದೇಶದ ಬೊಕ್ಕಸಕ್ಕೆ 5.36 ಲಕ್ಷ ಕೋಟಿ ರೂ.ಸಂಗ್ರಹವಾಗಲಿದೆಯೆಂದು ಅದು ಹೇಳಿದೆ.
ತರಂಗಗುಚ್ಛಗಳ ಹರಾಜಿಗೆ ಸಂಬಂಧಿಸಿ ಟ್ರಾಯ್‌ನ ಶಿಫಾರಸನ್ನು ಸಂಪುಟದ ಅನುಮೋದನೆಗಾಗಿ ಕಳುಹಿಸಿಕೊಡಲಾಗಿದೆಯೆಂದು ಟ್ರಾಯ್ ಮೂಲಗಳು ಶನಿವಾರ ತಿಳಿಸಿವೆ. ಜುಲೈನಲ್ಲಿ ತರಂಗಗುಚ್ಛಗಳ ಹರಾಜು ನಡೆಯಲಿದ್ದು, ಪ್ರತಿ ಎಂಎಚ್‌ಝಡ್ ಬ್ಯಾಂಡ್‌ಗೆ 11,485 ಕೋಟಿ ರೂ.ದರದಲ್ಲಿ ಸುಮಾರು 700 ಎಂಎಚ್‌ಝಡ್ ಬ್ಯಾಂಡ್‌ಗಳ ಮಾರಾಟವೂ ಇದರಲ್ಲಿ ಒಳಗೊಂಡಿದೆ. ಈ ಬ್ಯಾಂಡ್‌ನಲ್ಲಿ ಮೊಬೈಲ್ ಸೇವೆಗಳನ್ನು ನೀಡುವುದರಿಂದ, 3 ಜಿ ಸೇವೆಗಳಿಗೆ ಬಳಸಲಾಗುವ 2100 ಎಂಎಚ್‌ಝಡ್ ಬ್ಯಾಂಡ್‌ಗಿಂತ, ಶೇ.70ರಷ್ಟು ಕಡಿಮೆ ವೆಚ್ಚ ತಗಲಲಿದೆ.
ತರಂಗಗುಚ್ಛ ಮಾರಾಟದಿಂದ 5.36 ಲಕ್ಷ ಕೋಟಿ ರೂ. ಆದಾಯ ದೊರೆಯುವ ನಿರೀಕ್ಷೆಯಿದ್ದು, ಇದು 2014-15ರಲ್ಲಿ ನಡೆದ ಸ್ಪೆಕ್ಟ್ರಂ ಮಾರಾಟದಲ್ಲಿ ದೊರೆತ 2.54 ಲಕ್ಷ ರೂ. ಆದಾಯದ ಎರಡು ಪಟ್ಟು ಅಧಿಕವಾಗಿದೆ.





