ಸಿಬಿಐಯಿಂದ ನಿವೃತ್ತ ಏರ್‌ಮಾರ್ಶಲ್ ಗುಜ್ರಾಲ್‌ರ ವಿಚಾರಣೆ
ಹೊಸದಿಲ್ಲಿ, ಎ.30: ಆಗಸ್ಟಾ ವೆಸ್ಟ್‌ಲ್ಯಾಂಡ್‌ನೊಂದಿಗಿನ ರೂ.3,600 ಕೋಟಿಗಳ ವಿವಿಐಪಿ ಹೆಲಿಕಾಪ್ಟರ್ ಖರೀದಿ ಅವ್ಯವಹಾರದ ಕುರಿತು ಸಿಬಿಐ ಇಂದು ಭಾರತೀಯ ವಾಯು ದಳದ ಮಾಜಿ ಉಪದಂಡನಾಯಕ ಜೆ.ಎಸ್.ಗುಜ್ರಾಲ್‌ರ ವಿಚಾರಣೆ ನಡೆಸಿದೆ.
ಏರ್ ಮಾರ್ಶಲ್ (ನಿವೃತ್ತ) ಗುಜ್ರಾಲ್ ಮುಂಜಾನೆ ಇಲ್ಲಿನ ಸಿಬಿಐ ಮುಖ್ಯಾಲಯಕ್ಕೆ ಆಗಮಿಸಿ, ಪ್ರಕರಣದ ತನಿಖೆ ನಡೆಸುತ್ತಿರುವ ತಂಡದ ಮುಂದೆ ಹಾಜರಾದರು.
ಅಗತ್ಯಗಳ ವಿವರವನ್ನು ಬದಲಾಯಿಸುವ ನಿರ್ಣಯ ಕೈಗೊಳ್ಳುವುದಕ್ಕಾಗಿ 2005ರಲ್ಲಿ ನಡೆಸಿದ್ದ ಸಭೆಯೊಂದರಲ್ಲಿ ಭಾಗವಹಿಸಿದ್ದ ಅನೇಕ ಹಿರಿಯಾಧಿಕಾರಿಗಳಲ್ಲಿ ಗುಜ್ರಾಲ್‌ರೂ ಸೇರಿದ್ದರು.
ತನಿಖೆ ಸಂಸ್ಥೆಯು, ಸೋಮವಾರ ವಿಚಾರಣೆಗೆ ಹಾಜರಾಗುವಂತೆ ವಿಮಾನ ದಳದ ಮಾಜಿ ದಂಡನಾಯಕ ಎಸ್.ಪಿ.ತ್ಯಾಗಿಯವರಿಗೆ ಸೂಚಿಸಿದೆ.
2013ರಲ್ಲಿ ಇಬ್ಬರನ್ನೂ ಸುದೀರ್ಘ ವಿಚಾರಣೆಗೆ ಒಳಪಡಿಸಲಾಗಿತ್ತು. ಆದರೆ, ಇಟಲಿಯ ನ್ಯಾಯಾಲಯವೊಂದರ ಎ.7ರ ತೀರ್ಪಿನ ಬಳಿಕ, ಹೊಸದಾಗಿ ಅವರ ವಿಚಾರಣೆ ನಡೆಸುವುದು ಅಗತ್ಯವಾಗಿದೆ.
ಗುಜ್ರಾಲ್‌ರನ್ನು ಸಾಕ್ಷಿಯಾಗಿ ವಿಚಾರಣೆ ನಡೆಸಲಾಗಿದೆಯೆಂದು ಸಿಬಿಐ ಇದುವರೆಗೆ ಪ್ರತಿಪಾದಿಸಿಕೊಂಡು ಬಂದಿದೆ. ಆದರೆ, ಅವರಿನ್ನೂ ಅದೇ ಸ್ಥಾನದಲ್ಲಿ ಇದ್ದಾರೆಯೇ ಎಂಬ ಕುರಿತು ಅದು ವೌನವಾಗಿದೆ. ಆದಾಗ್ಯೂ, ಗುಜ್ರಾಲ್‌ರ ವಿರುದ್ಧ ಸಿಬಿಐ ಇದುವರೆಗೆ ಯಾವುದೇ ಆರೋಪ ಹೋರಿಸಿಲ್ಲ.







